ಮಳೆಗಾಲದಲ್ಲಿ ಬಹುತೇಕ ಮನೆಗಳಲ್ಲಿ ಬಿಸಿ ಬಿಸಿ ಬಜ್ಜಿ, ಪಕೋಡಾ ತಿನ್ನುವ ಹಂಬಲ ಹೆಚ್ಚಾಗುತ್ತದೆ. ಅದರಲ್ಲೂ ಹೋಟೆಲ್‌ನಲ್ಲಿ ಸಿಗುವ ಮಸಾಲೆಯ ಸುವಾಸನೆ ಹಾಗೂ ಗರಿಗರಿಯಾದ ಬಜ್ಜಿ ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ. ಆದರೆ, ಇಂತಹ ಬಜ್ಜಿ ಮನೆಯಲ್ಲೇ ಪರ್ಫೆಕ್ಟ್ ಆಗಿ ಮಾಡುವುದು ಅನೇಕರಿಗೆ ಕಷ್ಟವೆನಿಸುತ್ತದೆ. ಆದರೆ ತುಂಬಾನೇ ಸುಲಭ.
ಬೇಕಾಗುವ ಸಾಮಗ್ರಿಗಳು
ಬಜ್ಜಿ ಮೆಣಸಿನಕಾಯಿ – 15
ಕಡಲೆ ಹಿಟ್ಟು – 1 ಕಪ್ (250 ಗ್ರಾಂ)
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – 1 ಟೀಸ್ಪೂನ್
ಅರಿಶಿನ – ಚಿಟಿಕೆ
ಅಜವಾನ – 1 ಟೀಸ್ಪೂನ್
ಅಡುಗೆ ಸೋಡಾ – ಚಿಟಿಕೆ
ಜೋಳದ ಹಿಟ್ಟು – 1 ಟೀಸ್ಪೂನ್
ಮಸಾಲೆ ತುಂಬಲು:
ಹುಣಸೆಹಣ್ಣು – ಸಣ್ಣ ನಿಂಬೆ ಗಾತ್ರ
ಜೀರಿಗೆ – 1 ಟೀಸ್ಪೂನ್
ಸೋಂಪು – 1 ಟೀಸ್ಪೂನ್
ಉಪ್ಪು – ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಮೆಣಸಿನಕಾಯಿಗಳನ್ನು ತೊಳೆದು ಉದ್ದಕ್ಕೆ ಕತ್ತರಿಸಿ, ಬೀಜ ತೆಗೆದು ಬಿಡಬೇಕು. ನೆನೆಸಿದ ಹುಣಸೆಹಣ್ಣು, ಜೀರಿಗೆ, ಸೋಂಪು ಹಾಗೂ ಉಪ್ಪನ್ನು ಒಟ್ಟಿಗೆ ರುಬ್ಬಿ ಪೇಸ್ಟ್ ಮಾಡಬೇಕು. ಈ ಮಿಶ್ರಣವನ್ನು ಕತ್ತರಿಸಿದ ಮೆಣಸಿನಕಾಯಿಗಳೊಳಗೆ ತುಂಬಬೇಕು.
ಬೇರೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಜೋಳದ ಹಿಟ್ಟು, ಉಪ್ಪು, ಖಾರದ ಪುಡಿ, ಅರಿಶಿನ, ಅಜವಾನ ಮತ್ತು ಚಿಟಿಕೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟು ತಯಾರಿಸಬೇಕು. ಇದನ್ನು ಕನಿಷ್ಠ ಅರ್ಧ ಗಂಟೆ ಪಕ್ಕಕ್ಕೆ ಇಟ್ಟರೆ ಇನ್ನಷ್ಟು ಕ್ರಿಸ್ಪಿ ಆಗುತ್ತದೆ.
ಈಗ ಬಿಸಿ ಎಣ್ಣೆಯಲ್ಲಿ ಮಸಾಲೆ ತುಂಬಿದ ಮೆಣಸಿನಕಾಯಿಗಳನ್ನು ಹಿಟ್ಟಿನಲ್ಲಿ ಅದ್ದಿ ಕರಿಯಬೇಕು. ಹೊಂಬಣ್ಣಕ್ಕೆ ತಿರುಗಿದಾಗ ತೆಗೆದು ಬಿಸಿ ಬಿಸಿಯಾಗಿ ಸವಿಯಬಹುದು.