ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ದೊರೆಯಿತು.
ವಿಧಾನಸಭೆಯಲ್ಲಿ ಅಂಗೀಕೃತ ಸ್ವರೂಪದಲ್ಲಿರುವ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಅನ್ನು ಬೆಂಗಳೂರು ನಗರಾಭಿವೃದ್ದಿ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೇಲ್ಮನೆಯಲ್ಲಿ ಮಂಡಿಸಿದರು.
ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್ ಅವರು, ಈ ವಿಧೇಯಕದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿಯಲ್ಲಿ ಜಿಬಿಎ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸ್ಪಷ್ಟನೆ ನೀಡಲಾಗಿದೆ ಎಂದು ತಿಳಿಸಿದರು.
ಕೆಲವು ಶಾಸಕರು ಜನಸಂಖ್ಯೆ ಹಾಗೂ ವಾರ್ಡ್ ರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ನಾವು ಬಳಸಿರುವುದು 2011ರ ಜನಗಣತಿ. ಆಗ ಒಂದು ವಾರ್ಡ್ನಲ್ಲಿ 18 ಸಾವಿರ ಜನಸಂಖ್ಯೆ ಇದ್ದರೆ ಈಗಿನ ಪರಿಸ್ಥಿತಿಯಲ್ಲಿ 30 ಸಾವಿರದಷ್ಟು ಇರಲಿದೆ. ಮುಂದೆ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡಿಸುವ ಸಂದರ್ಭದಲ್ಲಿ ನಿಮ್ಮ ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ವಿಚಾರವನ್ನು ಬೇರೆ ರೂಪದಲ್ಲಿ ಚರ್ಚೆಗೆ ಪ್ರಸ್ತಾವನೆ ನೀಡಿ, ಆಗ ಈ ವಿಚಾರವಾಗಿ ನಿಮಗಿರುವ ಅನುಮಾನಗಳಿಗೆ ಸಂಪೂರ್ಣವಾಗಿ ವಿವರಣೆ ನೀಡುತ್ತೇನೆ. ಈಗ ಈ ವಿಧೇಯಕ ಅಂಗೀಕಾರ ಮಾಡಿಕೊಡಿ ಎಂದು ತಿಳಿಸಿದರು.