ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇಂದು (ಗುರುವಾರ) ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
ಆಕ್ಸಿಯಮ್ ಮಿಷನ್ 4ಗಾಗಿ ಶುಭಾಂಶು ಶುಕ್ಲಾ ಅವರ ನಿಯೋಜಿತ ಬ್ಯಾಕಪ್ ಆಗಿದ್ದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ “ಗಗನಯಾನ” ಕಾರ್ಯಕ್ರಮದ ಭಾಗವಾಗಿರುವ 4 ಗಗನಯಾತ್ರಿಗಳಲ್ಲಿ ಶುಭಾಂಶು ಶುಕ್ಲಾ ಮತ್ತು ಪ್ರಶಾಂತ್ ನಾಯರ್ ಕೂಡ ಸೇರಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದು, ‘ಇನ್ನು ಕೆಲವು ತಿಂಗಳುಗಳ ನಂತರ ನಮಗೆ ದೀಪಾವಳಿ ಹಬ್ಬ ಬರುತ್ತದೆ. ಶ್ರೀ ರಾಮ ಅಯೋಧ್ಯೆಯನ್ನು ಪ್ರವೇಶಿಸಿದ ಸಮಯ ಅದು. ನಾವು ಈಗ ರಾಮ-ಲಕ್ಷ್ಮಣರಾಗಿ ಭಾರತಕ್ಕೆ ಬಂದಿದ್ದೇವೆ. ಶುಭಾಂಶು ಶುಕ್ಲಾ ರಾಮನಾದರೆ ನಾನು ನನ್ನನ್ನು ಲಕ್ಷ್ಮಣ ಎಂದು ಕರೆದುಕೊಳ್ಳುತ್ತೇನೆ. ಇಂದು ಇಲ್ಲಿ ದೀಪಾವಳಿಯಂತೆ ಭಾಸವಾಗುತ್ತಿದೆ. ನಮ್ಮ ಎಲ್ಲಾ ದೇಶವಾಸಿಗಳು ನಮ್ಮನ್ನು ಸ್ವೀಕರಿಸಲು ಇಲ್ಲಿದ್ದಾರೆ. ಆದರೆ ನಾನು ಶುಭಾಂಶುಗಿಂತ ಹಿರಿಯನಾದರೂ ನಾನು ಪ್ರತಿದಿನ ಈ ರಾಮನಿಗೆ ಲಕ್ಷ್ಮಣನಾಗಲು ಇಷ್ಟಪಡುತ್ತೇನೆ. ಶ್ರೀ ರಾಮ ಮತ್ತು ಲಕ್ಷ್ಮಣರಿಗೆ ವಾನರ ಸೇನೆಯಿಂದ ಸಾಕಷ್ಟು ಸಹಾಯ ಸಿಕ್ಕಿತು. ಆ ವಾನರ ಸೇನೆ ನಮ್ಮ ಅದ್ಭುತ ಇಸ್ರೋ ತಂಡ. ನಮಗೆ ಎಲ್ಲ ಸಹಕಾರ ನೀಡುತ್ತಿರುವ ಇಸ್ರೋ ತಂಡಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಭಾರತಕ್ಕೆ ಈಗ ಸಮಯ ಬಂದಿದೆ. ಅದು ತಾಂತ್ರಿಕ ಪರಾಕ್ರಮವಾಗಿರಲಿ, ಉದ್ಯಮವಾಗಿರಲಿ ಅಥವಾ ಜೋಶ್ ಆಗಿರಲಿ ಈಗ ಭಾರತಕ್ಕೂ ತಕ್ಕ ಸಮಯ ಬಂದಿದೆ ಎಂದು ಪ್ರಶಾಂತ್ ನಾಯರ್ ಹೇಳಿದ್ದಾರೆ.
ಭಾರತವು 2027ರಲ್ಲಿ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟವನ್ನು ಕೈಗೊಳ್ಳಲು ಮತ್ತು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸಿದೆ. ಭಾರತವು 2040ರ ವೇಳೆಗೆ ಚಂದ್ರನ ಮೇಲೆ ತನ್ನದೇ ಆದ ಗಗನಯಾತ್ರಿಯನ್ನು ಇಳಿಸುವ ಗುರಿಯನ್ನು ಹೊಂದಿದೆ.