ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ , ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಕ್ರಿಯವಾಗಿರುವಾಗಲೇ ಸಿನಿಮಾಗಳಲ್ಲಿ ನಟಿಸುವುದನ್ನು ಸಹ ಮುಂದುವರೆಸಿದ್ದಾರೆ. ಆದರೆ ಇದೀಗ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಪವನ್ ಕಲ್ಯಾಣ್ ವಿರುದ್ಧ ಹೈಕೋರ್ಟ್ನಲ್ಲಿ ದೂರು ನೀಡಿದ್ದಾರೆ.
ಪವನ್ ಕಲ್ಯಾಣ್, ಸರ್ಕಾರದ ಭಾಗವಾಗಿ ಕೆಲವು ಮಹತ್ವದ ಸಚಿವಾಲಯಗಳ ಜವಾಬ್ದಾರಿ ಹೊತ್ತಿರುವಾಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಿಂದ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಮತ್ತು ಲಿಬರೇಷನ್ ಕಾಂಗ್ರೆಸ್ ಪಾರ್ಟಿಯ ಸಂಸ್ಥಾಪಕ ಜಿ ವಿಜಯ್ ಕುಮಾರ್ ಅವರು ಪವನ್ ಕಲ್ಯಾಣ್ ವಿರುದ್ಧ ಆಂಧ್ರ ಪ್ರದೇಶ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಚಿವಾಲಯಗಳನ್ನು ನಿಭಾಯಿಸುತ್ತಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ, ಸಿನಿಮಾ ವ್ಯವಹಾರಗಳೊಂದಿಗೆ ಸಂಬಂಧ ಇರಿಸಿಕೊಂಡಿರುವ ಬಗ್ಗೆ ತನಿಖೆ ನಡೆಸಲು ಆದೇಶಿಸಬೇಕೆಂದು ಮಾಜಿ ಐಎಎಸ್ ಅಧಿಕಾರಿ ಕೋರಿದ್ದಾರೆ.
ತಮ್ಮ ನಟನೆಯ ಸಿನಿಮಾ ಹಾಗೂ ಇನ್ನಿತರೆ ಸಿನಿಮಾಗಳ ಟಿಕೆಟ್ ದರ ಹೆಚ್ಚಳ ವಿಷಯದಲ್ಲಿ ತಮ್ಮ ಅಧಿಕಾರದ ದುರುಪಯೋಗವನ್ನು ಪವನ್ ಕಲ್ಯಾಣ್ ಮಾಡಿಕೊಂಡಿರುವ ಗುಮಾನಿ ಇದ್ದು, ಈ ಬಗ್ಗೆ ಸಿಬಿಐ ಹಾಗೂ ಇಡಿ ತನಿಖೆಗಳು ನಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ ಪವನ್ ವಿರುದ್ಧ ಹಿತಾಸಕ್ತಿ ಸಂಘರ್ಷ (ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್) ಅಡಿಯಲ್ಲಿ ತನಿಖೆ ನಡೆಸಿ, ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಸಹ ಕೋರಿದ್ದಾರೆ.
ಸಚಿವರಾಗಿದ್ದಾಗಲೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವುದು ಅಸಾಂವಿಧಾನಿಕ, ಅನೈತಿಕ ಹಾಗೂ ನಿಯಮ ಬಾಹಿರ ಎಂದು ಆರೋಪ ಮಾಡಲಾಗಿದ್ದು, ಕೇಂದ್ರ ಸರ್ಕಾರ ವಿಧಿಸಿರುವ ಸಾರ್ವಜನಿಕ ಹೊಣೆಗಾರಿಕೆ ನಿಯಮಗಳಿಗೆ ವಿರುದ್ಧವಾಗಿ ಪವನ್ ಕಲ್ಯಾಣ್ ನಡೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.