ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಮತ್ತು ಭಾರತದ ನಡುವಿನ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಲಿಪುಲೇಖ್ ಪಾಸ್ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸುವ ದೆಹಲಿ ಮತ್ತು ಬೀಜಿಂಗ್ ನಿರ್ಧಾರಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿದೆ. ಈ ಗಡಿ ತಮ್ಮದು ಎಂದಿರುವ ಕಠ್ಮಂಡುವಿನ ವಾದ ಸಮರ್ಥನೀಯವಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ನೇಪಾಳದ ಪ್ರಾದೇಶಕ ಹಕ್ಕಿನ ವಾದವನ್ನು ತಿರಸ್ಕರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರವನ್ನು ಪುನಾರಂಭದ ಬೆನ್ನಲ್ಲೇ ನೇಪಾಳ ನೀಡಿರುವ ಹೇಳಿಕೆಗಳನ್ನು ಗಮನಿಸಲಾಗಿದೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರವು 1954 ರಲ್ಲಿ ಪ್ರಾರಂಭವಾಯಿತು. ಅದು ದಶಕಗಳಿಂದ ನಡೆಯುತ್ತಿದೆ ಎಂದು ಹೇಳಿದರು.
ಕೋವಿಡ್ 19 ಸಾಂಕ್ರಾಮಿಕ ಹಾಗೂ ಇತರ ಬೆಳವಣಿಗೆಯಿಂದಾಗಿ ಎರಡು ದೇಶಗಳು ಈ ವ್ಯಾಪಾರ ನಿಲ್ಲಿಸಲು ಒಪ್ಪಿಗೆ ನೀಡಿದ್ದವು. ಇದೀಗ ಈ ಪ್ರದೇಶದ ಹಕ್ಕಿನ ಕುರಿತು ಹೇಳಿಕೆಗಳು ಸಮರ್ಥನೀಯವಲ್ಲ. ಇದು ಐತಿಹಾಸಿಕ ಸಂಗತಿ ಹಾಗೂ ಪುರಾವೆಗಳನ್ನು ಆಧರಿಸಿಲ್ಲ. ಪ್ರಾದೇಶಿಕ ಹಕ್ಕುಗಳ ಯಾವುದೇ ಏಕಪಕ್ಷೀಯ ಹಕ್ಕು ಸಮರ್ಥನೀಯವಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ನೇಪಾಳದ ಜೊತೆಗೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಒಪ್ಪಿಕೊಂಡಿರುವ ಬಾಕಿ ಇರುವ ಗಡಿ ಸಮಸ್ಯೆಗಳನ್ನು ಪರಿಹರಿಸುವ ಮಾತುಕತೆಗೆ ಭಾರತ ಮುಕ್ತವಾಗಿದೆ ಎಂದೂ ಹೇಳಿದ್ದಾರೆ.
ದೆಹಲಿಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಮಾತುಕತೆ ಬಳಿಕ ಎರಡು ದೇಶಗಳ ನಡುವಿನ ವ್ಯಾಪಾರ ಮರು ಆರಂಭಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಬಿಡುಗಡೆ ಮಾಡಲಾದ ಜಂಟಿ ಪ್ರಕಟಣೆಯಲ್ಲಿ ಮೂರು ಗೊತ್ತುಪಡಿಸಿದ ಜಾಗಗಳಲ್ಲಿ ಲಿಪುಲೇಖ್ ಪಾಸ್, ಶಿಪ್ಕಿ ಲಾ ಪಾಸ್ ಮತ್ತು ನಾಥು ಲಾ ಪಾಸ್ ವ್ಯಾಪಾರ ಕೇಂದ್ರಗಳ ಮೂಲಕ ಗಡಿ ವ್ಯಾಪಾರವನ್ನು ಮರು ಆರಂಭಿಸಲು ಎರಡು ದೇಶವೂ ಸಮ್ಮತಿಸಿದೆ ಎಂದು ತಿಳಿಸಲಾಗಿತ್ತು.
ಲಿಪುಲೇಖ್ ಮೂಲಕ ಗಡಿ ವ್ಯಾಪಾರವನ್ನು ಪುನಾರಂಭಿಸುವುದಾಗಿ ಭಾರತ ಮತ್ತು ಚೀನಾ ಘೋಷಿಸಿದ ಬೆನ್ನಲ್ಲೇ ನೇಪಾಳ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿತ್ತು.