ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ ಈಗ ಯೂಟರ್ನ್ ಹೊಡೆದಿದ್ದಾರೆ. ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ನೇರ ಹಸ್ತಕ್ಷೇಪದಿಂದ ಹಿಂದೆ ಸರಿಯಲು ಟ್ರಂಪ್ ನಿರ್ಧರಿಸಿದ್ದಾರೆ.
ಮುಂದಿನ ಹಂತದ ಶಾಂತಿ ಮಾತುಕತೆಗಳಲ್ಲಿ ಟ್ರಂಪ್ ನೇರವಾಗಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಬದಲಾಗಿ ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಮೊದಲು ಪರಸ್ಪರ ಭೇಟಿಯಾಗಬೇಕೆಂದು ಅವರು ಬಯಸಿದ್ದಾರೆ ಎಂದು ಶ್ವೇತಭವನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ದೃಷ್ಟಿಕೋನದಲ್ಲಿ ಯುದ್ಧ ಕೊನೆಗೊಳಿಸುವ ಮುಂದಿನ ಹೆಜ್ಜೆ ಪುಟಿನ್, ಝಲೆನ್ಸ್ಕಿ ನಡುವಿನ ದ್ವಿಪಕ್ಷೀಯ ಸಭೆ. ಈ ಸಭೆ ನಿಜವಾಗ್ಲೂ ನಡೆಯುತ್ತದೆಯೋ, ಇಲ್ಲವೋ? ಅನ್ನೋದು ಖಚಿತವಿಲ್ಲ ಎಂದು ಹೇಳಿದ್ದಾರೆ.