ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಕಸ ವಿಲೇವಾರಿಗೆ 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್ ಗಳಾಗಿ ವಿಂಗಡಿಸಿ ಟೆಂಡರ್ ಕರೆಯಲಾಗಿದೆ. ನಾಲ್ಕು ಜಾಗಗಳಲ್ಲಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೇಶವ ಪ್ರಸಾದ್ ಅವರು ಬೆಂಗಳೂರಿನ ಕಸ ವಿಲೇವಾರಿ ಹಾಗೂ ಕಸದ ಸೆಸ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
ಕಸ ವಿಲೇವಾರಿಗೆ ನೈಸ್ ಸಂಸ್ಥೆಗೆ ಸೇರಿದ ಜಾಗವನ್ನು ಪಡೆಯಲಾಗಿದೆ. ದೊಡ್ಡಬಳ್ಳಾಪುರ ಬಳಿಯ ಜಾಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿಯಿತ್ತು. ಕ್ಯಾಬಿನೆಟ್ ಅನುಮತಿ ಪಡೆದು ಮುಂದುವರಿದಿದ್ದೇವೆ. ಕಸ ವಿಲೇವಾರಿಗೆಂದು ಆಧುನಿಕ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಇದನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಣೆ ಮಾಡಬೇಕು ಎನ್ನುವ ಆಲೋಚನೆಯಿದೆ ಎಂದು ತಿಳಿದರು.
ಬೆಂಗಳೂರಿನ ಕಸದ ಮಾಫಿಯಾವನ್ನು ಅಷ್ಟು ಸುಲಭದಲ್ಲಿ ಭೇದಿಸಲು ಆಗುವುದಿಲ್ಲ. ನಿಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ 98 ವಾರ್ಡ್ ಗಳಿಗೆ ಟೆಂಡರ್ ಕರೆದಾಗ ಅದನ್ನೂ ಮಾಡಲು ಬಿಡಲಿಲ್ಲ. ಕಸ ವಿಲೇವಾರಿ ವಿಚಾರಕ್ಕೆ ನಾನೂ ಸಹ ದೊಡ್ಡ ಹೋರಾಟ ಮಾಡಿದೆ. ಈ ಹಿಂದಿನ ಟೆಂಡರ್ ವ್ಯವಸ್ಥೆ ರದ್ದುಗೊಳಿಸಿ ಹೊಸ ಟೆಂಡರ್ ಕರೆಯಬೇಕು ಎಂದು ನ್ಯಾಯಲಯ ನಮ್ಮಿಂದ ಅಫಿಡವಿಟ್ ಬರೆಸಿಕೊಂಡಿದೆ. ಟೆಂಡರ್ ನಲ್ಲಿ ಅಕ್ರಮ ನಡೆದಿದೆ ಎಂದು ವರದಿ ಬಂದ ಮೇಲೆ ತನಿಖೆ ನಡೆಸಿ ರದ್ದುಗೊಳಿಸಲಾಗಿದೆ. ಕಸ ವಿಲೇವಾರಿ ಘಟಕಗಳನ್ನು ಸಹ ತೆರೆಯಲಾಗಿದೆ ಎಂದರು.