ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಓದುವ ಸರಕಾರಿ ಶಾಲೆಗೆ ಕಾಂಪೌಂಡ್ ಕಟ್ಟಿಸಿಕೊಡುವವರೆಗೆ ನಾನು ಶಾಲೆಗೆ ಹೋಗಲ್ಲ ಎಂದು ನಾಲ್ಕನೇ ತರಗತಿ ಬಾಲಕಿಯೊಬ್ಬಳು ಹಠ ಹಿಡಿದು ಕುಳಿತಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೆಳಧರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಸ್ವತಃ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಭೇಟಿ ನೀಡಿದರು. ಈ ವೇಳೆ ಬಾಲಕಿಯ ಮನವೊಲಿಸಲು ನ್ಯಾಯಾಧೀಶರು ಪ್ರಯತ್ನಿಸಿದ್ದಾರೆ. ಆದರೂ ಕೂಡ ಬಾಲಕಿಯು ಶಾಲಾ ಕಾಂಪೌಂಡ್ ನಿರ್ಮಾಣ ಮಾಡಿದ ನಂತರವೇ ಶಾಲೆಗೆ ಹೋಗುವುದಾಗಿ ಪಟ್ಟು ಹಿಡಿದು ಕುಳಿತಿದ್ದಾಳೆ.
ಬಾಲಕಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಅವರಿಗೆ ಪ್ರತ್ಯೇಕ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿದ್ದಾಳೆ. ಪತ್ರದಲ್ಲಿ, ತುಮಕೂರು ಜಿಲ್ಲೆ ಬೆಳಧರ ಸರಕಾರಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದೇನೆ. ನಮ್ಮ ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ಇಲ್ಲದೇ ಇರುವುದರಿಂದ ಬೇರೆಯವರ ಕಾರುಗಳೆಲ್ಲಾ ನಿಲ್ಲುತ್ತಿರುವುದರಿಂದ ನನಗೆ ಆಟದ ಮೈದಾನಕ್ಕೆ ಹೋಗಲು ಭಯವಾಗುತ್ತದೆ. ದಯವಿಟ್ಟು ಕಾಂಪೌಂಡ್ ಕಟ್ಟಿಸಿ ಕೊಡಿ. ನಾನು ಕಾಂಪೌಂಡ್ ಆಗುವವರೆಗೆ ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ.