ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಮೊದಲು ನಿಗದಿಯಾಗಿದ್ದಂತೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಲೀಗ್ ಹಂತದ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯವನ್ನು ಐಸಿಸಿ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ. ಈ ನಿರ್ಧಾರಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ನಡೆದ ಕಾಲ್ತುಳಿತ ದುರಂತವೇ ಪ್ರಮುಖ ಕಾರಣವೆಂದು ತಿಳಿದುಬಂದಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಐದು ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಮೂರು ಲೀಗ್ ಪಂದ್ಯಗಳು, ಒಂದು ಸೆಮಿಫೈನಲ್ ಮತ್ತು ಪಾಕಿಸ್ತಾನ ಫೈನಲ್ ತಲುಪದಿದ್ದಲ್ಲಿ ಅಂತಿಮ ಪಂದ್ಯವೂ ಸೇರಲಿದೆ. ನವಿ ಮುಂಬೈನ ಜೊತೆಗೆ ಗುವಾಹಟಿ, ಇಂದೋರ್, ವಿಶಾಖಪಟ್ಟಣ ಮತ್ತು ಕೊಲಂಬೊದಲ್ಲಿಯೂ ಪಂದ್ಯಗಳು ನಡೆಯಲಿವೆ.
ಹಳೆಯ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 30 ರಂದು ಬೆಂಗಳೂರು ಮೈದಾನದಲ್ಲಿ ಭಾರತ-ಶ್ರೀಲಂಕಾ ಪಂದ್ಯ ನಡೆಯಬೇಕಿತ್ತು, ಈಗ ಅದು ಗುವಾಹಟಿಗೆ ಸ್ಥಳಾಂತರಗೊಂಡಿದೆ. ಅಕ್ಟೋಬರ್ 3 ರಂದು ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವೂ ಬೆಂಗಳೂರಿನಲ್ಲಿ ನಡೆಯಬೇಕಿತ್ತು, ಆದರೆ ಈಗ ಅದು ಗುವಾಹಟಿಯಲ್ಲಿ ನಡೆಯಲಿದೆ. ಅಕ್ಟೋಬರ್ 20 ರಂದು ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಕೊಲಂಬೊ ಬದಲು ನವಿ ಮುಂಬೈನಲ್ಲಿ ನಡೆಯಲಿದೆ. ಅಲ್ಲದೆ, ಅಕ್ಟೋಬರ್ 23 ರಂದು ಭಾರತ-ನ್ಯೂಜಿಲೆಂಡ್ ಹಾಗೂ ಅಕ್ಟೋಬರ್ 26 ರಂದು ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯಗಳೂ ನವಿ ಮುಂಬೈಗೆ ಸ್ಥಳಾಂತರಗೊಂಡಿವೆ.
ಮೊದಲ ಸೆಮಿಫೈನಲ್ ಅಕ್ಟೋಬರ್ 29 ರಂದು ಗುವಾಹಟಿ ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ಅಕ್ಟೋಬರ್ 30 ರಂದು ನವಿ ಮುಂಬೈನಲ್ಲಿ ನಡೆಯಲಿದೆ. ಪಾಕಿಸ್ತಾನ ಸೆಮಿಫೈನಲ್‌ಗೆ ತಲುಪಿದರೆ ಅದು ಕೊಲಂಬೊದಲ್ಲಿ ಆಡಲಿದೆ. ಪಾಕಿಸ್ತಾನ ಫೈನಲ್ ತಲುಪಿದರೆ ಅಂತಿಮ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನ ಅರ್ಹತೆ ಪಡೆಯದಿದ್ದರೆ, ಎಲ್ಲಾ ನಾಕೌಟ್ ಪಂದ್ಯಗಳು ಭಾರತದಲ್ಲೇ ನಡೆಯುತ್ತವೆ.