ಆರ್‌ಸಿಬಿ ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ. ಮುಖ್ಯಮಂತ್ರಿಯಾಗದೇ ಇದ್ದಿದ್ದರೂ ಸಹ ಮನುಷ್ಯನಾದ ಕಾರಣಕ್ಕೆ ನನ್ನನ್ನು ದುಃಖಿತನನ್ನಾಗಿ ಮಾಡುತ್ತಿತ್ತು ಎಂಬುದನ್ನು ಅಂತಃಕರಣ ಪೂರ್ವಕವಾಗಿ ತಿಳಿಸಬಯಸುತ್ತೇನೆ. ಆರ್‌ಸಿಬಿ, ಡಿಎನ್ಎ‌ ಮತ್ತು ಕೆಎಸ್‌ಸಿಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದರು.

​ನಾನು ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ಮಕ್ಕಳನ್ನು ಕಳೆದುಕೊಂಡ ದುಃಖದ ಭಾರ ಏನು ಎಂಬ ಅರಿವು ನನಗಿದೆ. ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ ಎಂದ ಅವರು, ​ವ್ಯವಸ್ಥೆಯಲ್ಲಿನ ಲೋಪಗಳಿಂದ ವಿನಾಕಾರಣ ದುರಂತಕ್ಕೀಡಾದ ಮಕ್ಕಳಾಗಲಿ, ಕುಟುಂಬಗಳ ಸದಸ್ಯರಾಗಲಿ ಬದುಕಿರುವವನ್ನು ಶಾಶ್ವತ ದುಃಖದಲ್ಲಿ ಮುಳುಗಿಸುತ್ತವೆ. ಮಕ್ಕಳು ಬದುಕಿದ್ದರೆ ಯಾರ್ಯಾರು ಯಾವ ಯಾವ ಸಾಧನೆ ಮಾಡುತ್ತಿದ್ದರೋ ಯಾರಿಗೆ ಗೊತ್ತು? ಎಂದರು.

​ಆರ್. ಅಶೋಕ್ ಮತ್ತು ಸುರೇಶ್ ಕುಮಾರ್ ರವರು ಮಾತನಾಡುವಾಗ ಸಮೂಹ ಸನ್ನಿ ಎಂಬ ಪದವನ್ನು ಬಳಸಿದರು. ಅದನ್ನು ಇಂಗ್ಲಿಷ್‌ನಲ್ಲಿ Mass Hysteria ಎನ್ನುತ್ತಾರೆ. ಈ ಸಮೂಹ ಸನ್ನಿ ಯಾಕಾಗುತ್ತದೆ. ಅದು ಬಡ ದೇಶ ಇರಲಿ, ಶ್ರೀಮಂತ ದೇಶ ಇರಲಿ ಎಲ್ಲಾ ಸಮಾಜಗಳಲ್ಲಿಯೂ ಸಂಭವಿಸುವ ಕಾಯಿಲೆ ಯಾಕಾಗಿದೆ? ಮತ್ತು ಅದಕ್ಕೆ ನೀಡಬೇಕಾದ ಚಿಕಿತ್ಸೆಗಳೇನು ಎನ್ನುವ ಬಗ್ಗೆ ನಾವುಗಳೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾದ 18 ವರ್ಷಗಳಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿರಲಿಲ್ಲ. 2025 ರಲ್ಲಿ ನಡೆದ ಆವೃತ್ತಿಯಲ್ಲಿ ಮಾತ್ರ ಟ್ರೋಫಿ ಗೆದ್ದಿತ್ತು. ಆರ್.ಸಿ.ಬಿ. ಮಾಲೀರ‍್ಯಾರು ಎಂಬ ಸಂಗತಿ ನಗಣ್ಯವಾಗಿ ಬೆಂಗಳೂರು ಮತ್ತು ಕರ್ನಾಟಕ ವರ್ಸಸ್ ಪಂಜಾಬ್ ಎನ್ನುವ ಮನೋಭಾವನೆ ಉದ್ಭವವಾಗಿದೆ. ಕರ್ನಾಟಕದ ಬೆಂಗಳೂರಿನ ಹೆಸರನ್ನಿಟ್ಟುಕೊಂಡು ಆಟವಾಡುವ ತಂಡ, ಕರ್ನಾಟಕಕ್ಕೇ ಆಟವಾಡುತ್ತಿದೆ ಎಂಬ ಭಾವನಾತ್ಮಕವಾದ ಮನಸ್ಥಿತಿಯನ್ನು ಮಾಧ್ಯಮಗಳು ಹಾಗೂ ಸಮಾಜ ಜನರಲ್ಲಿ ಕಟ್ಟಿ ಬೆಳೆಸಿವೆ. ಇದಷ್ಟೆ ಅಲ್ಲದೆ, ಐಪಿಎಲ್. ಕ್ರಿಕೆಟ್ ತಂಡಗಳಲ್ಲಿ ಜಗತ್ತಿನಲ್ಲಿಯೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಆರ್‌ಸಿಬಿ ಸಹ ಒಂದಾಗಿದೆ. ಹಾಗಾಗಿ ಯುವಜನರಲ್ಲಿ ಈ ಹುಚ್ಚು ಉನ್ಮಾದ ತುಂಬಿ ತುಳುಕುತ್ತಿದೆ ಎಂದರು.

​ಅನೇಕ ಸಾರಿ ನಾವು ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಆತ್ಮಸಾಕ್ಷಿಗಳಿಗೆ ಒಪ್ಪದಿದ್ದರೂ ಕೆಲವೊಮ್ಮೆ ಜನರ ಆಶೋತ್ತರಗಳು ಮುಖ್ಯವಾಗುತ್ತವೆ. ಇದು ಪ್ರಜಾಪ್ರಭುತ್ವದ ಲಕ್ಷಣ ಕೂಡ. ​ಆರ್‌ಸಿಬಿ. ಬೆಂಗಳೂರಿನ ಅಸ್ಮಿತೆ ಅಷ್ಟೆ ಅಲ್ಲ. ಕರ್ನಾಟಕದ ಅಸ್ಮಿತೆ ಎಂಬ0ತೆ ಮಾಡಲಾಯಿತು. ಹಾಗಾಗಿ ಆರ್.ಸಿ.ಬಿ. ಗೆದ್ದಾಗ ಫೆಲಿಸಿಟೇಟ್ ಮಾಡಲಿಲ್ಲ ಎಂದರೆ ಕನ್ನಡಿಗರ ಭಾವನೆಗಳಿಗೆ ಮಾಡಿದ ಅವಮಾನ ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಯಿತು. ಹಾಗಾಗಿ ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆ ಕೂಡ ಎಂದರು.

ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಈ ವರ್ಷ ನನಸು ಮಾಡಿದೆ. ಆದರೆ, ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಪರಮೇಶ್ವರ್ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಈ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೆಶ್ವರ್ ಎಂದು ಬಿಜೆಪಿ ಅಧಿಕೃತವಾದ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ​ಜನರ ಉನ್ಮಾದದ ಕಿಚ್ಚಿಗೆ ನೀವುಗಳು ತುಪ್ಪ ಸುರಿದಿದ್ದೀರೋ ಇಲ್ಲವೋ? ಹೇಳಿ ಎಂದು ಕೇಳಿದರು.

​ಆರ್.ಸಿ.ಬಿ. ತಂಡದ ಮಾಲೀಕರ ಹಿನ್ನೆಲೆ ಸರಿ ಇಲ್ಲ, ಒಪ್ಪುತ್ತೇನೆ. ಆದರೆ ಗುಜರಾತ್ ಟೈಟನ್ಸ್ ತಂಡದ ಮಾಲೀಕರಾದ ಟೊರೆಂಟ್ ಗ್ರೂಪ್‌ನ ಮೆಹ್ತಾ ಕುಟುಂಬದ ಹಿನ್ನೆಲೆ ಸರಿ ಇದೆಯೇ? ಎಂದು ನೋಡಿದರೆ, ಟೊರೆಂಟ್ ಗ್ರೂಪ್‌ನ ಔಷಧಿ, ವಿದ್ಯುತ್, ಹಣಕಾಸಿಗೆ ಸಂಬಂಧಿಸಿದಂತೆ ನಡೆದ ಫ್ರಾಡ್‌ಗಳಿಗೆ ಸಂಬಂಧಿಸಿದಂತೆ ಸೆಬಿ ಸಂಸ್ಥೆಯು ಕೇಸ್‌ಗಳನ್ನು ಬುಕ್ ಮಾಡಿತ್ತು. ಆನಂತರ ಪ್ರಭಾವ ಬೀರಿ ಕೇಸ್‌ಗಳಿಂದ ಮುಕ್ತ ಮಾಡಲಾಯಿತು. ಗುಜರಾತ್ ಟೈಟನ್ಸ್ ನ ಇನ್ನೊಬ್ಬ ಪಾಲುದಾರರಾದ ಸಿವಿಸಿ ಸಂಸ್ಥೆಯ ಮೇಲೂ ಗಂಭೀರವಾದ ಆರೋಪಗಳಿವೆ ಎಂಬುದು ವಿರೋಧ ಪಕ್ಷಗಳವರಿಗೆ ತಿಳಿದಿರಲಿ ಎಂದು ಹೇಳುತ್ತಿದ್ದೇನೆ.

ತನಿಖಾ ವರದಿಗಳ ಪ್ರಕಾರ ಆರ್.ಸಿ.ಬಿ. ಯು 04.06.2025 ರಂದು ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ ವಿಜಯೋತ್ಸವ ಆಚರಣೆ ಮಾಡುವ ಬಗ್ಗೆ ಟ್ವೀಟ್ ಅನ್ನು 16 ಲಕ್ಷ ಜನ ವೀಕ್ಷಿಸಿದ್ದರು. 8 ಗಂಟೆಗೆ ಮಾಡಿದ್ದ ಟ್ವೀಟ್ ಅನ್ನು 4 ಲಕ್ಷದ 35 ಸಾವಿರ ಜನ ನೋಡಿದ್ದರು. ಮೂರನೇ ಟ್ವೀಟ್ 03 ಗಂಟೆ 10 ನಿಮಿಷಕ್ಕೆ ಮಾಡಲಾಯಿತು, ಅದನ್ನು 7.10 ಲಕ್ಷ ಜನರು ನೋಡಿದ್ದರು. ಆರ್.ಸಿ.ಬಿ., ಡಿ.ಎನ್.ಎ. ಮತ್ತು ಕೆ.ಎಸ್.ಸಿ.ಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!