ಎಡಪಂಥೀಯರ ಒತ್ತಡಕ್ಕೆ ಕಾಂಗ್ರೆಸ್ ನಿಂದ ಸುದರ್ಶನ್ ರೆಡ್ಡಿ ಆಯ್ಕೆ: ವಿಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಕುರಿತು ಅಮಿತ್ ಶಾ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಡಪಂಥೀಯರ ಒತ್ತಡದಿಂದ ಕಾಂಗ್ರೆಸ್ ಸುದರ್ಶನ್ ರೆಡ್ಡಿಯನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೊಚ್ಚಿಯಲ್ಲಿ ಖಾಸಗಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಸುದರ್ಶನ್ ರೆಡ್ಡಿ ಎಡಪಂಥೀಯ ಉಗ್ರವಾದ ಮತ್ತು ನಕ್ಸಲಿಸಂ ಅನ್ನು ಬೆಂಬಲಿಸುವ ಸಾಲ್ವಾ ಜುಡುಮ್ ತೀರ್ಪು ನೀಡಿದ ವ್ಯಕ್ತಿ. ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಈ ತೀರ್ಪು ನೀಡದಿದ್ದರೆ 2020ರ ವೇಳೆಗೆ ಉಗ್ರವಾದವನ್ನು ನಿರ್ಮೂಲನೆ ಮಾಡಲಾಗುತ್ತಿತ್ತು. ಕೇರಳವು ನಕ್ಸಲಿಸಂನ ಪರಿಣಾಮವನ್ನು ಅನುಭವಿಸಿದೆ. ಉಗ್ರವಾದವನ್ನೂ ಸಹಿಸಿಕೊಂಡಿದೆ ಎಂದಿದ್ದಾರೆ.

ಎಡಪಂಥೀಯರ ಒತ್ತಡದ ಮೇರೆಗೆ ಸುಪ್ರೀಂ ಕೋರ್ಟ್‌ನಂತಹ ವೇದಿಕೆಯನ್ನು ಬಳಸಿಕೊಂಡು ಎಡಪಂಥೀಯ ಉಗ್ರವಾದ ಮತ್ತು ನಕ್ಸಲ್‌ವಾದವನ್ನು ಬೆಂಬಲಿಸಿದ ಸುದರ್ಶನ್ ರೆಡ್ಡಿಯನ್ನು ಅಭ್ಯರ್ಯಾಗಿ ಕಾಂಗ್ರೆಸ್ ಆಯ್ಕೆ ಮಾಡಿದೆ. 2011ರಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುದರ್ಶನ್ ರೆಡ್ಡಿ ಮತ್ತು ಎಸ್‌ಎಸ್ ನಿಜ್ಜರ್ ಅವರ ದ್ವಿಸದಸ್ಯ ಪೀಠವು ಮಾವೋವಾದಿ ದಂಗೆಯನ್ನು ಎದುರಿಸಲು ಛತ್ತೀಸ್‌ಗಢ ಸರ್ಕಾರವು ಬುಡಕಟ್ಟು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ (ಎಸ್‌ಪಿಒ) ನೇಮಿಸಿದ ಸಾಲ್ವಾ ಜುಡುಮ್ ಅನ್ನು ವಿಸರ್ಜಿಸಿತು. ಈ ಸಂಘಟನೆಯು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ನ್ಯಾಯಪೀಠ ಹೇಳಿತ್ತು.

ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯ ಬಣದಿಂದ ಕಣಕ್ಕಿಳಿದಿರುವ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಮತ್ತು ಎನ್‌ಡಿಎಯ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಯ ಮತದಾನ ಸೆಪ್ಟೆಂಬರ್ 9ರಂದು ನಡೆಯಲಿದ್ದು, ಅದೇ ದಿನ ಎಣಿಕೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!