ಪಂದ್ಯ ನಡಿಬೇಕಾದ್ರೆ ಈ ಷರತ್ತುಗಳಿಗೆ ಒಪ್ಪಬೇಕು! ಕೆಎಸ್​ಸಿಎಗೆ 17 ಕಂಡಿಷನ್ಸ್ ಹಾಕಿದ ಬೆಂಗಳೂರು ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಕ್ರೀಡಾಭಿಮಾನಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣವೆಂದರೆ ವಿಶೇಷವಾದ ನೆನಪುಗಳನ್ನು ಮರುಕಳಿಸೋ ಸ್ಥಳ. ಆದರೆ ಇತ್ತೀಚೆಗೆ ನಡೆದ ದುರ್ಘಟನೆಯ ನಂತರ ಈ ಮೈದಾನದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತದೆಯೇ ಎಂಬ ಆತಂಕ ಎಲ್ಲೆಡೆ ಹೆಚ್ಚಾಗಿದೆ. RCB ತಂಡ ಐಪಿಎಲ್ ಕಿರೀಟ ಗೆದ್ದ ಬಳಿಕ ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂಭ್ರಮವು ಕೆಲವೇ ಕ್ಷಣಗಳಲ್ಲಿ ದುರಂತವಾಗಿ ಮಾರ್ಪಟ್ಟಿತ್ತು. ಈ ಘಟನೆಯ ನಂತರ ಮೈಕೆಲ್ ಕುನ್ಹಾ ನೇತೃತ್ವದ ಸಮಿತಿ ಚಿನ್ನಸ್ವಾಮಿ ಕ್ರೀಡಾಂಗಣವು ದೊಡ್ಡ ಕಾರ್ಯಕ್ರಮಗಳಿಗೆ ತಕ್ಕ ಮಟ್ಟಿಗೆ ಸಿದ್ಧವಾಗಿಲ್ಲ ಎಂಬ ತೀವ್ರ ವರದಿ ಸಲ್ಲಿಸಿತ್ತು. ಪರಿಣಾಮವಾಗಿ ಮಹಾರಾಜ ಟಿ20 ಟ್ರೋಫಿ ಮೈಸೂರಿಗೆ ಸ್ಥಳಾಂತರಿಸಲ್ಪಟ್ಟಿದ್ದು, ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳನ್ನು ನವಿ ಮುಂಬೈಗೆ ಶಿಫ್ಟ್ ಮಾಡಲಾಗಿದೆ.

ನಗರ ಪೊಲೀಸರ ನಿಲುವು ಈ ಸಂದರ್ಭದಲ್ಲಿ ಮುಖ್ಯವಾಗಿದ್ದು, ಕೆಎಸ್‌ಸಿಎಗೆ ಒಟ್ಟು 17 ಷರತ್ತುಗಳನ್ನು ವಿಧಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯಿಂದ ಹಿಡಿದು ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರವೇಶ ದಾರಿಗಳು, ಬ್ಯಾಗ್ ಸ್ಕ್ಯಾನರ್‌ಗಳು, ಪ್ರಥಮ ಚಿಕಿತ್ಸೆ ವ್ಯವಸ್ಥೆ, ತುರ್ತು ನಿರ್ಗಮನ ದಾರಿಗಳು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ಪ್ರತಿ ಪಂದ್ಯಕ್ಕೂ ಪೊಲೀಸರ ಅನುಮತಿ ಕಡ್ಡಾಯ ಎಂದು ಸೂಚಿಸಲಾಗಿದೆ. ಈ ಷರತ್ತುಗಳನ್ನು 15 ದಿನಗಳಲ್ಲಿ ಜಾರಿಗೆ ತರಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ಪಂದ್ಯಗಳು ನಡೆಯುತ್ತವೆಯೇ ಎಂಬುದು ಈ ಷರತ್ತುಗಳನ್ನು ಪೂರೈಸುವಿಕೆಗೆ ಅವಲಂಬಿತವಾಗಿದೆ. ಅಭಿಮಾನಿಗಳ ನಿರೀಕ್ಷೆ ಒಂದೇ – ತಮಗೆ ಹತ್ತಿರವಾಗಿರುವ ಈ ಮೈದಾನದಲ್ಲಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಡೆಯಬೇಕು. ಆದರೆ ಸುರಕ್ಷತೆ ಎಂಬ ಅಂಶಕ್ಕೆ ಪ್ರಥಮ ಆದ್ಯತೆ ನೀಡಲೇಬೇಕಾದ ಪರಿಸ್ಥಿತಿ ಸ್ಪಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!