ಹೊಸದಿಗಂತ ಡಿಜಿಟಲ್ ಡೆಸ್ಕ್:
130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ‘ಕಪ್ಪು ಮಸೂದೆ’ ಎಂದು ಕರೆಯುವ ಯಾವುದೇ ಹಕ್ಕು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ಗೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ತಿರುನೆಲ್ವೇಲಿಯಲ್ಲಿ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾ,130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕಪ್ಪು ಮಸೂದೆ ಎಂದು ತಿರಸ್ಕರಿಸುವ ಹಕ್ಕು ಸ್ಟಾಲಿನ್ಗೆ ಇಲ್ಲ. ಏಕೆಂದರೆ ಅವರು ಭ್ರಷ್ಟ ಕೆಲಸ ಮಾಡಿದ ಸಿಎಂ ಆಗಿದ್ದಾರೆ ಎಂದು ಗುಡುಗಿದರು.
ಡಿಎಂಕೆಯು ದೇಶದಲ್ಲಿ ‘ಅತ್ಯಂತ ಭ್ರಷ್ಟ’ ಸರ್ಕಾರವಾಗಿದೆ. ತಮಿಳು ಸಾಹಿತ್ಯದ ಶ್ರೇಷ್ಠ ಕೃತಿ ‘ತಿರುಕ್ಕುರಲ್’ ನಂತೆ ಸಮರ್ಥ, ದಕ್ಷ ಸರ್ಕಾರವನ್ನು ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.
ರಾಜ್ಯ ಮದ್ಯದ ನಿಗಮ TASMAC, ಮರಳು ಗಣಿಗಾರಿಕೆ, ಮೂಲಸೌಕರ್ಯ, ಸಾರಿಗೆ ಇಲಾಖೆ, ಪೌಷ್ಟಿಕಾಂಶ ಕಿಟ್, ಉಚಿತ ಧೋತಿ, ಉದ್ಯೋಗಕ್ಕಾಗಿ ಹಣ, ಪಡಿತರ ಕಳ್ಳಸಾಗಣೆ ಮತ್ತು MGNREGAದಲ್ಲಿ ಬಡ ತಮಿಳರ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದೇ ಅವರ ಏಕೈಕ ಅಜೆಂಡ ಆಗಿದೆ. ಅದೇ ರೀತಿ ಸ್ಟಾಲಿನ್ ಅವರ ಏಕೈಕ ಅಜೆಂಡಾ ಅವರ ಪುತ್ರ ಉದಯನಿಧಿಯನ್ನು ಮುಖ್ಯಮಂತ್ರಿ ಮಾಡುವುದಾಗಿದೆ. ಎನ್ಡಿಎ ವಿಜಯಶಾಲಿಯಾಗುವುದರಿಂದ ಇವೆರಡೂ ಫಲ ನೀಡುವುದಿಲ್ಲ ಎಂದು ಶಾ ಪ್ರತಿಪಾದಿಸಿದರು.
ಡಿಎಂಕೆ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ತಮಿಳುನಾಡಿನಲ್ಲಿ 2026 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಐಎಡಿಎಂಕೆ ಮತ್ತು ಎನ್ಡಿಎ ಮೈತ್ರಿಕೂಟ ಗೆದ್ದು ಸರ್ಕಾರ ರಚಿಸಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.