ಪೂರಿ ಅಂದ್ರೆ ಎಲ್ಲರಿಗೂ ಪರಿಚಿತವಾದ ಉಪಹಾರ. ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ಪೂರಿಗಳನ್ನು ತಯಾರಿಸಲಾಗುತ್ತದೆ. ಆದರೆ ಇದೇ ಪೂರಿಯನ್ನು ಸ್ವಲ್ಪ ವಿಭಿನ್ನವಾಗಿ, ಅವಲಕ್ಕಿಯನ್ನು ಸೇರಿಸಿ ಮಾಡಿದರೆ ಇನ್ನಷ್ಟು ರುಚಿಕರವಾಗುತ್ತದೆ. ಮಸಾಲೆಯ ಸುವಾಸನೆಯೊಂದಿಗೆ ಸಾಫ್ಟ್ ಆಗಿ ಉಬ್ಬುವ ಅವಲಕ್ಕಿ ಪೂರಿ ಬೆಳಗಿನ ಉಪಹಾರಕ್ಕಷ್ಟೇ ಅಲ್ಲ, ಮಧ್ಯಾಹ್ನ ಅಥವಾ ಸಂಜೆ ತಿಂಡಿಯಾಗಿಯೂ ತಿನ್ನಬಹುದು.
ಬೇಕಾಗುವ ಪದಾರ್ಥಗಳು
ಅವಲಕ್ಕಿ – 2 ಕಪ್
ಗೋಧಿ ಹಿಟ್ಟು – 1 ಕಪ್
ಕಡಲೆ ಹಿಟ್ಟು – 1 ಕಪ್
ಹಸಿಮೆಣಸು ಪೇಸ್ಟ್ – 2 ಟೀಸ್ಪೂನ್
ಅಜವಾನ – 1 ಟೀಸ್ಪೂನ್
ಬಿಳಿ ಎಳ್ಳು – 2 ಟೀಸ್ಪೂನ್
ಜೀರಿಗೆ ಪುಡಿ, ಖಾರದ ಪುಡಿ, ಗರಂ ಮಸಾಲ – ತಲಾ 1 ಟೀಸ್ಪೂನ್
ಅರಿಶಿನ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಕರಿಯಲು
ತಯಾರಿಸುವ ವಿಧಾನ
ಮೊದಲು ದಪ್ಪ ಅವಲಕ್ಕಿಯನ್ನು ತೊಳೆದು, ಸ್ವಲ್ಪ ನೀರು ಹಾಕಿ ಹತ್ತು ನಿಮಿಷ ನೆನೆಸಿಡಬೇಕು. ನಂತರ ಅದಕ್ಕೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಮೆಣಸು ಪೇಸ್ಟ್, ಎಳ್ಳು, ಮಸಾಲೆಗಳು, ಕೊತ್ತಂಬರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಸ್ವಲ್ಪ ಬಿಸಿ ಎಣ್ಣೆ ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ, ಹತ್ತು ನಿಮಿಷ ಮುಚ್ಚಿ ಬಿಡಬೇಕು. ನಂತರ ಉಂಡೆಗಳಾಗಿ ಮಾಡಿ ಸ್ವಲ್ಪ ದಪ್ಪವಾಗುವಂತೆ ಪೂರಿಗಳನ್ನು ಲಟ್ಟಿಸಿ, ಬಿಸಿ ಎಣ್ಣೆಯಲ್ಲಿ ಹುರಿಯಬೇಕು.