ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಮಾತನಾಡಿದಾಗಲೆಲ್ಲಾ ಶಾಖಾಹಾರದ ಮಹತ್ವವನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. ಅನೇಕ ಸಂಸ್ಕೃತಿಗಳಲ್ಲಿ ಇದನ್ನು ಸಾತ್ವಿಕ ಹಾಗೂ ಪೌಷ್ಠಿಕ ಆಹಾರವೆಂದು ಪರಿಗಣಿಸಲಾಗಿದೆ. ಕೆಲ ಅಧ್ಯಯನಗಳು ಶಾಖಾಹಾರಿಗಳು ಮಾಂಸಾಹಾರಿಗಳನ್ನು ಹೋಲಿಸಿದರೆ ಹೆಚ್ಚು ಕಾಲ ಬದುಕುತ್ತಾರೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತವೆ. ಆದರೆ ಇದರ ಹಿಂದೆ ಇರುವ ಕಾರಣಗಳೇನು ಎಂಬುದನ್ನು ಗಮನಿಸುವುದು ಮುಖ್ಯ.
ಶಾಖಾಹಾರದಲ್ಲಿ ಕೊಲೆಸ್ಟ್ರಾಲ್ ಮತ್ತು ಬ್ಯಾಡ್ ಫ್ಯಾಟ್ ಅಂಶಗಳು ಕಡಿಮೆ ಇರುತ್ತವೆ. ಇದರಿಂದ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಡೆಯಲು ಸಹಕಾರಿಯಾಗುತ್ತದೆ. ಹಣ್ಣು, ತರಕಾರಿ ಹಾಗೂ ಧಾನ್ಯಗಳಲ್ಲಿ ಇರುವ ವಿವಿಧ ವಿಟಮಿನ್, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ಸ್ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಇದಲ್ಲದೆ, ಶಾಖಾಹಾರದಲ್ಲಿ ಫೈಬರ್ ಪ್ರಮಾಣ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಮಲಬದ್ಧತೆ, ಜೀರ್ಣಕ್ರಿಯಾ ಸಮಸ್ಯೆಗಳು ಮತ್ತು ಹೊಟ್ಟೆ ಸಂಬಂಧಿ ತೊಂದರೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ. ಇದಕ್ಕೆ ವಿರುದ್ಧವಾಗಿ, ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಅದೇ ರೀತಿ ಶಾಖಾಹಾರದಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ಮತ್ತು ಫೈಟೊಕೆಮಿಕಲ್ಸ್ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಕೆಲ ಅಧ್ಯಯನಗಳು ಕೊಲೊನ್, ಸ್ತನ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಶಾಖಾಹಾರ ಕಡಿಮೆ ಮಾಡಬಹುದು ಎಂದು ಸೂಚಿಸಿವೆ.
ಡಯಾಬಿಟಿಸ್ ನಿಯಂತ್ರಣದಲ್ಲಿಯೂ ಶಾಖಾಹಾರ ಮಹತ್ವದ್ದಾಗಿದೆ. ವಿಶೇಷವಾಗಿ ಟೈಪ್ 2 ಡಯಾಬಿಟಿಸ್ ತಡೆಗಟ್ಟಲು ಶಾಖಾಹಾರಿ ಆಹಾರ ಕ್ರಮ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೆಲವು ಅಧ್ಯಯನಗಳು ಶಾಖಾಹಾರಿಗಳು ಸರಾಸರಿ 6 ರಿಂದ 8 ವರ್ಷ ಹೆಚ್ಚು ಬದುಕುತ್ತಾರೆ ಎಂದು ಹೇಳಿದರೂ, ಇದು ಎಲ್ಲರಿಗೂ ಅನ್ವಯಿಸುವ ದೃಢವಾದ ತೀರ್ಮಾನವಲ್ಲ. ಆದರೆ ಆರೋಗ್ಯ, ಜೀರ್ಣಕ್ರಿಯೆ ಮತ್ತು ಕಾಯಿಲೆ ತಡೆಗಟ್ಟುವಲ್ಲಿ ಶಾಖಾಹಾರ ನಿಸ್ಸಂದೇಹವಾಗಿ ಸಹಕಾರಿ ಎಂಬುದು ಸ್ಪಷ್ಟ.