ಕಿಡ್ನಿ ಕ್ಯಾನ್ಸರ್ ಇಂದು ವಿಶ್ವದಾದ್ಯಂತ ಆತಂಕ ಮೂಡಿಸಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ವಿಶ್ವ ಕ್ಯಾನ್ಸರ್ ವರದಿಗಳ ಪ್ರಕಾರ ಇದು ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ಗಳಲ್ಲಿ 14ನೇ ಸ್ಥಾನದಲ್ಲಿದೆ. ಮೂತ್ರಪಿಂಡದಲ್ಲಿ ಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭವಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಆದರೆ ಆರೋಗ್ಯಕರ ಜೀವನಶೈಲಿ ಹಾಗೂ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಕಿಡ್ನಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಧೂಮಪಾನವನ್ನು ನಿಲ್ಲಿಸಿ
ಸಿಗರೇಟು ಸೇದುವುದು ಕಿಡ್ನಿ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಧ್ಯಯನಗಳ ಪ್ರಕಾರ ಧೂಮಪಾನ ಮಾಡುವವರಲ್ಲಿ ಕಿಡ್ನಿ ಕ್ಯಾನ್ಸರ್ ಅಪಾಯವು ಶೇಕಡಾ 39 ರಷ್ಟು ಹೆಚ್ಚಾಗಿರುತ್ತದೆ. ಹೀಗಾಗಿ ಧೂಮಪಾನದಿಂದ ಸಂಪೂರ್ಣವಾಗಿ ದೂರವಿರುವುದು ಕಿಡ್ನಿ ಹಾಗೂ ಶ್ವಾಸಕೋಶದ ಆರೋಗ್ಯಕ್ಕೆ ಅತ್ಯುತ್ತಮ.
ದೇಹದ ತೂಕವನ್ನು ನಿಯಂತ್ರಿಸಿ
ಅತಿಯಾದ ದೇಹದ ತೂಕವು ಹಾರ್ಮೋನಲ್ ಬದಲಾವಣೆಗೆ ಕಾರಣವಾಗಿ ರೆನಲ್ ಸೆಲ್ ಕಾರ್ಸಿನೊಮಾ ಅಪಾಯವನ್ನು ಹೆಚ್ಚಿಸುತ್ತದೆ. ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಹಾಗೂ ಜೀವನಶೈಲಿ ಬದಲಾವಣೆಗಳ ಮೂಲಕ ತೂಕವನ್ನು ನಿಯಂತ್ರಣದಲ್ಲಿಡುವುದು ಅಗತ್ಯ.
ರಕ್ತದೊತ್ತಡವನ್ನು ಕಾಪಾಡಿ
ಅತಿಯಾದ ರಕ್ತದೊತ್ತಡವು ಕಿಡ್ನಿಯ ಆರ್ಟರೀಸ್ಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ ಬ್ಲಡ್ ಪ್ರೆಶರ್ ಅನ್ನು ನಿಯಂತ್ರಿಸುವುದು ಕಿಡ್ನಿ ಕ್ಯಾನ್ಸರ್ ತಡೆಗಟ್ಟುವ ಪ್ರಮುಖ ಹೆಜ್ಜೆಯಾಗಿದೆ.
ಪೌಷ್ಠಿಕ ಆಹಾರ ಸೇವನೆ
ಹಣ್ಣು, ತರಕಾರಿ, ಹಸಿರು ಸೊಪ್ಪು, ಧಾನ್ಯಗಳು ಮುಂತಾದವುಗಳಲ್ಲಿ ಸಮೃದ್ಧ ಪೋಷಕಾಂಶಗಳು ದೊರೆಯುತ್ತವೆ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಕಿಡ್ನಿಯ ಆರೋಗ್ಯವನ್ನು ಕಾಪಾಡುತ್ತದೆ.
ಮದ್ಯಪಾನ ನಿಯಂತ್ರಿಸಿ
ಅತಿಯಾದ ಮದ್ಯಪಾನವು ಕಿಡ್ನಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮದ್ಯವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು ಅಥವಾ ಮಿತಿಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಕಿಡ್ನಿ ಕ್ಯಾನ್ಸರ್ ತಡೆಯಲು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳೇ ದೊಡ್ಡ ರಕ್ಷಣೆಯಾಗಬಹುದು. ಧೂಮಪಾನ, ಮದ್ಯಪಾನ ದೂರವಿಟ್ಟು, ತೂಕ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಿ, ಪೌಷ್ಠಿಕ ಆಹಾರ ಸೇವಿಸುವುದರಿಂದ ಕಿಡ್ನಿಯ ಆರೋಗ್ಯವನ್ನು ಕಾಪಾಡಿ.