ಜೇನುತುಪ್ಪವನ್ನು ಪೌರಾಣಿಕ ಕಾಲದಿಂದಲೇ ಔಷಧೀಯ ಗುಣಗಳನ್ನು ಹೊಂದಿರುವ ಆಹಾರವೆಂದು ಪರಿಗಣಿಸಲಾಗಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವರು ದಿನನಿತ್ಯದ ಆಹಾರದಲ್ಲಿ ಜೇನುತುಪ್ಪವನ್ನು ಬಳಸುತ್ತಾರೆ. ಇದರಲ್ಲಿ ಆಂಟಿಆಕ್ಸಿಡೆಂಟ್ಸ್, ಖನಿಜಗಳು ಮತ್ತು ಶಕ್ತಿದಾಯಕ ಅಂಶಗಳು ಸಮೃದ್ಧವಾಗಿವೆ. ಆದರೆ ಆಯುರ್ವೇದ ಶಾಸ್ತ್ರವು ಕೆಲವು ಆಹಾರಗಳೊಂದಿಗೆ ಜೇನುತುಪ್ಪ ಸೇವನೆ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸುತ್ತದೆ. ಆರೋಗ್ಯ ಲಾಭ ಪಡೆಯಲು ಸರಿಯಾದ ರೀತಿಯಲ್ಲಿ ಜೇನುತುಪ್ಪವನ್ನು ಬಳಸುವುದು ಮುಖ್ಯ.
ಬಿಸಿಯಾದ ಪದಾರ್ಥಗಳೊಂದಿಗೆ ಸೇವಿಸಬಾರದು
ಆಯುರ್ವೇದದ ಪ್ರಕಾರ ಜೇನುತುಪ್ಪವನ್ನು ಬಿಸಿ ಹಾಲು, ಬಿಸಿ ಚಹಾ, ಬಿಸಿ ನಿಂಬೆ ನೀರು ಅಥವಾ ಬೆಚ್ಚಗಿನ ನೀರಿನಲ್ಲಿ ಸೇರಿಸಿ ಸೇವಿಸುವುದರಿಂದ ಅದು ವಿಷಕಾರಿ ಪರಿಣಾಮ ಉಂಟುಮಾಡಬಹುದು. ಹೀಗಾಗಿ ಜೇನುತುಪ್ಪವನ್ನು ಯಾವಾಗಲೂ ತಣ್ಣಗಿನ ಪದಾರ್ಥಗಳೊಂದಿಗೆ ಮಾತ್ರ ಸೇವಿಸಬೇಕು.
ಜೇನುತುಪ್ಪವನ್ನು ಬಿಸಿಮಾಡಬೇಡಿ
ಜೇನುತುಪ್ಪವನ್ನು ಬಿಸಿ ಮಾಡಿದರೆ ಅದರಲ್ಲಿರುವ ಪೋಷಕಾಂಶಗಳು ಹಾಳಾಗುತ್ತವೆ. ಬಿಸಿಮಾಡಿದ ಜೇನು ತುಪ್ಪ ದೇಹದಲ್ಲಿ ವಿಷಕಾರಕ ಗುಣ ತೋರಬಹುದು ಎಂದು ತಜ್ಞರು ಹೇಳುತ್ತಾರೆ.
ಶುದ್ಧ ಜೇನುತುಪ್ಪ ಬಳಸುವುದು ಮುಖ್ಯ
ಮಾರ್ಕೆಟ್‌ನಲ್ಲಿ ಸಿಗುವ ಜೇನುತುಪ್ಪ ನೈಸರ್ಗಿಕವಾಗಿಯೇ ಇದೆಯೇ ಎಂಬ ಅನುಮಾನ ಸದಾ ಇರುತ್ತದೆ. ಬೆಟ್ಟಗಳಲ್ಲಿ ದೊರೆಯುವ ನೈಸರ್ಗಿಕ ಜೇನು ಹೆಚ್ಚು ಆರೋಗ್ಯಕರ. ಶುದ್ಧ ಜೇನು ಎಂದು ತಿಳಿಯಲು ನೀರಿನ ಪರೀಕ್ಷೆ ಮಾಡಬಹುದು – ಶುದ್ಧ ಜೇನು ನೀರಿನಲ್ಲಿ ಬೆರೆಯುವುದಿಲ್ಲ, ಆದರೆ ಕಲಬೆರಕೆ ಜೇನು ಕೂಡಲೇ ಕರಗುತ್ತದೆ.
ಅತಿಯಾಗಿ ಸೇವನೆ ಬೇಡ
ಜೇನುತುಪ್ಪವನ್ನು ಮಿತಿಯಾಗಿ ಸೇವಿಸಿದರೆ ಮಾತ್ರ ಅದು ಆರೋಗ್ಯಕ್ಕೆ ಒಳ್ಳೆಯದು. ಅತಿಯಾಗಿ ಸೇವಿಸಿದರೆ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚುವ ಸಾಧ್ಯತೆ ಇದೆ.
ಜೇನುತುಪ್ಪವು ಆರೋಗ್ಯಕ್ಕೆ ಬಹುಮುಖ್ಯವಾದ ಆಹಾರ. ಆದರೆ ಆಯುರ್ವೇದ ಸೂಚಿಸುವ ನಿಯಮಗಳನ್ನು ಪಾಲಿಸಿ ತಿನ್ನುವುದು ಅಗತ್ಯ. ಬಿಸಿ ಪದಾರ್ಥಗಳೊಂದಿಗೆ ಮಿಶ್ರಣ ಮಾಡುವುದನ್ನು ತಪ್ಪಿಸಿ, ಶುದ್ಧ ಜೇನುತುಪ್ಪವನ್ನು ಮಿತಿಯಲ್ಲಿ ಸೇವಿಸಿದರೆ ದೇಹಕ್ಕೆ ಶಕ್ತಿ, ರೋಗನಿರೋಧಕ ಶಕ್ತಿ ಹಾಗೂ ಆರೋಗ್ಯಕರ ಜೀವನ ದೊರಕುತ್ತದೆ.