ಮಳೆಗಾಲ, ಚಳಿಗಾಲ ಅಥವಾ ಹವಾಮಾನದಲ್ಲಿ ತಕ್ಷಣವಾಗುವ ಬದಲಾವಣೆಗಳಿಂದಾಗಿ ಮಕ್ಕಳು ಅಸ್ವಸ್ಥರಾಗುವುದು ಸಾಮಾನ್ಯ. ಈ ಸಮಯದಲ್ಲಿ ಜ್ವರ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತವೆ. ಜ್ವರ ಬಂದಾಗ ಮಕ್ಕಳು ಸಾಮಾನ್ಯವಾಗಿ ಸರಿಯಾಗಿ ಆಹಾರ ತಿನ್ನುವುದಿಲ್ಲ, ಇದರಿಂದ ಅವರ ದೇಹ ಇನ್ನಷ್ಟು ದುರ್ಬಲವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪೌಷ್ಠಿಕಾಂಶಯುಕ್ತ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ನೀಡುವುದು ಬಹಳ ಮುಖ್ಯ. ಸರಿಯಾದ ಆಹಾರ ಪದ್ಧತಿ ಮಗುವಿನ ದೇಹವನ್ನು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸೂಪ್ ಮತ್ತು ರಾಗಿ ಅಂಬಲಿ
ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಬಿಸಿ ಸೂಪ್ ಕುಡಿಸುವುದು ಉತ್ತಮ. ಇದರಲ್ಲಿ ಅಗತ್ಯವಾದ ಜೀವಸತ್ವಗಳು ಹಾಗೂ ಖನಿಜಾಂಶಗಳಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ. ಜೊತೆಗೆ ರಾಗಿ ಅಂಬಲಿಯೂ ಒಳ್ಳೆಯ ಆಯ್ಕೆಯಾಗುತ್ತದೆ. ಇದು ಪೋಷಕಾಂಶಯುಕ್ತವಾಗಿದ್ದು ಸುಲಭವಾಗಿ ಜೀರ್ಣಗೊಳ್ಳುತ್ತದೆ.
ದ್ರವ ಆಹಾರಗಳು
ಜ್ವರದ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಹೀಗಾಗಿ ಮಕ್ಕಳಿಗೆ ನೀರು, ಎಳನೀರು, ಮೊಸರು ನೀಡುವುದು ಅಗತ್ಯ. ಮೊಸರಿನಲ್ಲಿರುವ ಪ್ರೋಬಯಾಟಿಕ್ ಅಂಶ ಜೀರ್ಣಕ್ರಿಯೆ ಸುಧಾರಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನಿರ್ಜಲೀಕರಣ ಹೆಚ್ಚಾದರೆ ವೈದ್ಯರ ಸಲಹೆಯ ಮೇರೆಗೆ ORS ನೀಡಬಹುದು.
ಕಾಲೋಚಿತ ಹಣ್ಣುಗಳು
ಹಣ್ಣುಗಳು ಮಕ್ಕಳಿಗೆ ಶಕ್ತಿ ಮತ್ತು ಜೀವಸತ್ವಗಳನ್ನು ನೀಡುತ್ತವೆ. ಬಾಳೆಹಣ್ಣು ಹೊಟ್ಟೆಗೆ ಹಗುರವಾಗಿದ್ದು ಸುಲಭವಾಗಿ ಜೀರ್ಣಗೊಳ್ಳುತ್ತದೆ. ಸೇಬು, ಪೇರಳೆ, ಪಪ್ಪಾಯಿ, ಕಿತ್ತಳೆ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಲ್ಲಂಗಡಿಯಲ್ಲಿ ನೀರಿನಾಂಶ ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಮಾಡಲು ಸಹಾಯಕ.
ತಪ್ಪಿಸಬೇಕಾದ ಆಹಾರಗಳು
ಜ್ವರ ಬಂದ ಸಮಯದಲ್ಲಿ ಮಸಾಲೆಯುಕ್ತ, ಎಣ್ಣೆಯುಕ್ತ, ಹುರಿದ ಆಹಾರಗಳನ್ನು ತಪ್ಪಿಸುವುದು ಮುಖ್ಯ. ಇವು ಜೀರ್ಣವಾಗಲು ಕಷ್ಟವಾಗುತ್ತವೆ ಮತ್ತು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು. ಜೊತೆಗೆ ಚಾಕೊಲೇಟ್, ಕುಕೀಸ್, ತಂಪು ಪಾನೀಯಗಳನ್ನು ಮಕ್ಕಳಿಗೆ ನೀಡಬಾರದು.
ಮಕ್ಕಳಿಗೆ ಜ್ವರ ಬಂದಾಗ ತಕ್ಷಣ ಔಷಧಿ ಕೊಡುವುದಷ್ಟೇ ಅಲ್ಲ, ಸರಿಯಾದ ಆಹಾರ ನೀಡುವುದೂ ಮುಖ್ಯ. ಸೂಪ್, ರಾಗಿ ಅಂಬಲಿ, ದ್ರವ ಆಹಾರಗಳು ಮತ್ತು ಹಣ್ಣುಗಳು ಮಗುವಿನ ಚೇತರಿಕೆಗೆ ಸಹಾಯಕವಾಗುತ್ತವೆ.