ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರಂತರ ಮಳೆಗೆ ಸರ್ಕಾರಿ ಶಾಲೆಯ ಸೀಲಿಂಗ್ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸೇಡಂ ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಕ್ಷಣವೇ ಗುರುಮಿಠಕಲ್ ತಾಲೂಕು ಆಸ್ಪತ್ರೆಗೆ ಗಾಯಗೊಂಡ ಮಕ್ಕಳನ್ನ ರವಾನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.
ನಿರಂತರ ಮಳೆಯಿಂದಾಗಿ ಶಾಲೆಯ ಸೀಲಿಂಗ್ ಕುಸಿದು ಬಿದ್ದಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಬ್ಬರನ್ನು ಹೊರೋಗಿಗಳಾಗಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಓರ್ವ ಬಾಲಕನ ತಲೆಗೆ ಗಾಯವಾಗಿದ್ದು, ಸ್ಕ್ಯಾನಿಂಗ್’ಗೆ ಒಳಪಡಿಸಲಾಗಿದೆ. 2 ಹೊಲಿಗೆಗಳನ್ನು ಹಾಕಲಾಗಿದ್ದು, ಚಿಕಿತ್ಸೆ ಬಳಿಕ ಆತನನ್ನು ಮನೆಗೆ ಕಳುಹಿಸಲಾಗಿಾದೆ ಎಂದು ಸೇಡಂ ತಾಲ್ಲೂಕಿನ ಬ್ಲಾಕ್ ಶಿಕ್ಷಣ ಅಧಿಕಾರಿ ಮಾರುತಿ ಹಜುರತಿ ಅವರು ಹೇಳಿದ್ದಾರೆ.
ಶಾಲಾ ಶಿಕ್ಷಣದ ಉಪನಿರ್ದೇಶಕ ಸೂರ್ಯಕಾಂತ್ ಮದನಿ ಮಾತನಾಡಿ, 6 ಕೊಠಡಿಗಳನ್ನು ಹೊಂದಿರುವ ಹೊಸ ಶಾಲಾ ಕಟ್ಟಡವನ್ನು ಈಗಾಗಲೇ ನಿರ್ಮಿಸಲಾಗಿದ್ದು, ಅದನ್ನು ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹೊಸ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಓರ್ವ ವ್ಯಕ್ತಿಗೆ ಸಂಬಂಧಿಸಿದ ಭೂಮಿಯಲ್ಲಿಯೇ ಹಾದುಹೋಗಬೇಕಿದೆ. ಇದೀಗ ಭೂ ಮಾಲೀಕರು ಹಾಗೂ ಗ್ರಾಮ ಪಂಚಾಯತ್ ನಡುವೆ ವಿವಾದವಿದೆ. ಇದರಿಂದಾಗಿ ಶಾಲೆಯು ಹಳೆಯ ಕಟ್ಟಡದಲ್ಲಿಯೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.