ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ (ಪಪ್ಪಿ) ಅವರನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ತಿಳಿಸಿದೆ.
ಶುಕ್ರವಾರ ಹಲವು ರಾಜ್ಯಗಳಲ್ಲಿ ನಡೆಸಿದ ದಾಳಿಯ ನಂತರ 12 ಕೋಟಿ ರೂ. ನಗದು (ಕೋಟಿ ರೂ. ವಿದೇಶಿ ಕರೆನ್ಸಿ ಸೇರಿದಂತೆ), 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸುಮಾರು 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಕೇಂದ್ರದ ತನಿಖಾ ಸಂಸ್ಥೆ ತಿಳಿಸಿದೆ.
ಯಾವ ಕಡೆಗಳಿಂದ ಏನನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ತನಿಖಾ ಸಂಸ್ಥೆ ಸ್ಪಷ್ಟಪಡಿಸಿಲ್ಲ.
ಚಿತ್ರದುರ್ಗದ 50 ವರ್ಷದ ಶಾಸಕರನ್ನು ಶುಕ್ರವಾರ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಮತ್ತು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಅದು ಹೇಳಿದೆ.
ಈ ಪ್ರಕರಣದ ತನಿಖೆಯನ್ನು ಇ.ಡಿಯ ಬೆಂಗಳೂರು ವಲಯ ನಡೆಸುತ್ತಿದೆ.