ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಏಷ್ಯಾಕಪ್ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಚ್ಚರಿಯ ಆಘಾತವನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ – 2025 ಪ್ರಕಾರ ಆನ್‌ಲೈನ್ ಗೇಮಿಂಗ್ ಕಂಪನಿಗಳಿಂದ ಯಾವುದೇ ರೀತಿಯ ಪ್ರಾಯೋಜಕತ್ವವನ್ನು ಪಡೆಯಲು ಅವಕಾಶವಿಲ್ಲ. ಇದರಿಂದಾಗಿ ಬಿಸಿಸಿಐ ತನ್ನ ಪ್ರಮುಖ ಪ್ರಾಯೋಜಕತ್ವಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಹೊಸ ಕಾಯ್ದೆಯಡಿ ಹಣ ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅವುಗಳ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿ, ಡ್ರೀಮ್ 11 ಮತ್ತು ಮೈ 11 ಸರ್ಕಲ್ ಜೊತೆಗಿನ ಬಿಸಿಸಿಐ ಒಪ್ಪಂದಗಳು ರದ್ದಾಗಲಿವೆ. ಡ್ರೀಮ್ 11 ಪ್ರಸ್ತುತ ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕವಾಗಿದ್ದರೆ, ಮೈ 11 ಸರ್ಕಲ್ ಮುಂದಿನ ಮೂರು ವರ್ಷಗಳ ಕಾಲ ಐಪಿಎಲ್ ಫ್ಯಾಂಟಸಿ ಹಕ್ಕುಗಳನ್ನು ಹೊಂದಿತ್ತು. ಈ ಒಪ್ಪಂದಗಳು ಕೊನೆಗೊಂಡರೆ ಬಿಸಿಸಿಐಗೆ ಸುಮಾರು 400 ಕೋಟಿ ರೂಪಾಯಿ ನಷ್ಟವಾಗುವ ಅಂದಾಜು ಇದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಕುರಿತು ಮಾತನಾಡಿ “ಈ ಕಾನೂನು ಜಾರಿಯಾದ ನಂತರ ಸರ್ಕಾರದ ಅನುಮತಿ ಇದ್ದರೆ ಮಾತ್ರ ಇಂತಹ ಕಂಪನಿಗಳಿಂದ ಪ್ರಾಯೋಜಕತ್ವ ಪಡೆಯುತ್ತೇವೆ. ಇಲ್ಲವಾದರೆ ಸಿಗರೇಟ್ ಮತ್ತು ಮದ್ಯ ಬ್ರಾಂಡ್‌ಗಳಂತೆ, ಗೇಮಿಂಗ್ ಕಂಪನಿಗಳಿಂದಲೂ ಪ್ರಾಯೋಜಕತ್ವವನ್ನು ತಿರಸ್ಕರಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಹೊಸ ಕಾಯ್ದೆಯಲ್ಲಿ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ನಿಷೇಧವನ್ನು ಮುಂದುವರಿಸಿದೆ. ಆದರೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ ಆಡುವುದಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ–ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಖಚಿತವಾಗಿದೆ.