‘ಕೊತ್ತಲವಾಡಿ’ ಫ್ಲಾಪ್‌ ಆಗೋದಕ್ಕೆ ಅವನೇ ಕಾರಣ: ಯಶ್ ತಾಯಿ ಪುಷ್ಪ ದೂರು ಹಾಕಿದ್ದು ಯಾರಮೇಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿದ್ದ ಯಶ್ ಅವರ ತಾಯಿ ಪುಷ್ಪಲತಾ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಚಿತ್ರದ ಪ್ರಚಾರದ ಸಮಯದಲ್ಲಿ ಪುಷ್ಪಲತಾ ನೀಡಿದ್ದ ನೇರ ಹಾಗೂ ಸಿಡಿಗುಂಡಿನಂತಿರುವ ಉತ್ತರಗಳು ವೈರಲ್ ಆಗಿದ್ದರೂ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತ್ತು. ಆದರೆ, ಚಿತ್ರದ ವಿಫಲತೆಗೆ ಪ್ರೇಕ್ಷಕರು ಕಾರಣವಲ್ಲ ಎಂದು ಅವರು ಹೇಳಿ, ಕನ್ನಡದ ಜನಪ್ರಿಯ ನಿರ್ಮಾಪಕ ಮತ್ತು ವಿತರಕ ಕಾರ್ತಿಕ್ ಗೌಡ ಅವರ ವಿರುದ್ಧ ನೇರ ಆರೋಪ ಹೊರಿಸಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಪುಷ್ಪಲತಾ, “ನಮ್ಮ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಕೊಡದೆ ತಡೆ ಮಾಡಲಾಗಿದೆ. ಇದರ ಹಿಂದೆ ಕಾರ್ತಿಕ್ ಗೌಡ ಇದ್ದಾರೆ. ಅವರ ಸಿನಿಮಾಗೆ ಆದ್ಯತೆ ನೀಡಿ, ನಮ್ಮ ಸಿನಿಮಾ ಕಡೆಗಣಿಸಲಾಗಿದೆ. ನಾನು ಹೆಸರು ಹೇಳಿಯೇ ಈ ಆರೋಪ ಮಾಡುತ್ತಿದ್ದೇನೆ” ಎಂದು ಗಂಭೀರ ಹೇಳಿಕೆ ನೀಡಿದ್ದಾರೆ.

ಇದಲ್ಲದೆ, “ಇಂದು ನನಗೆ ಮಾಡಿದಂತೆ, ನಾಳೆ ನಾನು ಸಹ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇನೆ. ಕಾರ್ತಿಕ್ ಅವರ ಹಿಂದೆ ಯಾರು ಇದ್ದಾರೆಂಬುದು ನನಗೆ ಗೊತ್ತು. ಸೂಕ್ತ ಸಮಯದಲ್ಲಿ ಅವರ ಹೆಸರನ್ನೂ ಮಾಧ್ಯಮಗಳ ಮುಂದೆ ತರುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.

“ನನಗೆ ಮಾಡಿದ ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿರುವವಳಲ್ಲ ನಾನು. ಯಾರೇ ನನ್ನನ್ನು ಕೆಣಕಿದರೂ, ನಾನು ಇನ್ನೂ ಬಲವಾಗಿ ನಿಂತುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಗಮನಾರ್ಹ ವಿಷಯವೇನಂದರೆ, ಕೆಆರ್‌ಜಿ ನಿರ್ಮಾಣ ಸಂಸ್ಥೆಯ ‘ಎಕ್ಕ’ ಸಿನಿಮಾ ಜುಲೈ 18ರಂದು ಬಿಡುಗಡೆಯಾಗಿತ್ತು. ಅದಾದ ಕೆಲವೇ ದಿನಗಳ ಬಳಿಕ ‘ಕೊತ್ತಲವಾಡಿ’ ಚಿತ್ರ ಪ್ರೇಕ್ಷಕರ ಮುಂದೆ ಬಂದಿತ್ತು. ಈಗ ಪುಷ್ಪಲತಾ ಅವರ ಆರೋಪವೆಂದರೆ, ‘ಎಕ್ಕ’ ಚಿತ್ರ ಪ್ರದರ್ಶನವಾಗುತ್ತಿದ್ದ ಕಾರಣದಿಂದ ‘ಕೊತ್ತಲವಾಡಿ’ಗೆ ಚಿತ್ರಮಂದಿರಗಳು ದೊರೆಯಲಿಲ್ಲ ಎಂದು.

ಚಿತ್ರರಂಗದಲ್ಲಿ ಪ್ರಚಾರ, ಚಿತ್ರಮಂದಿರ ಹಂಚಿಕೆ ಹಾಗೂ ಸ್ಪರ್ಧೆ ಯಾವಾಗಲೂ ಚರ್ಚೆಗೆ ಗ್ರಾಸವಾಗುವ ವಿಷಯಗಳಾಗಿವೆ. ಪುಷ್ಪಲತಾ ಮಾಡಿದ ಆರೋಪಗಳು ಗಂಭೀರವಾಗಿದ್ದು, ಈಗ ಎಲ್ಲರ ಗಮನ ಕಾರ್ತಿಕ್ ಗೌಡ ಅವರ ಪ್ರತಿಕ್ರಿಯೆಯತ್ತ ತಿರುಗಿದೆ. ಮುಂದಿನ ದಿನಗಳಲ್ಲಿ ಈ ಆರೋಪ-ಪ್ರತ್ಯಾರೋಪಗಳು ಯಾವ ದಿಕ್ಕಿಗೆ ತಿರುಗುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!