ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರದೇಶದ ಛಿಂಡ್ವಾರಾ ಜಿಲ್ಲೆಯಲ್ಲಿ ನಡೆಯುವ ಕಲ್ಲೆಸೆಯುವ ಗೋಟ್ಮಾರ್ ಜಾತ್ರೆಯಲ್ಲಿ ಸುಮಾರು 934 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
400 ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಈ ಹಬ್ಬವನ್ನು ಪಂದುರ್ನಾ ಮತ್ತು ಸಾವರ್ಗಾಂವ್ ಗ್ರಾಮಸ್ಥರು ಪ್ರತಿವರ್ಷ ಆಚರಿಸುತ್ತಾರೆ. ಆಗಸ್ಟ್ 23ರಂದು ನಡೆದ ಈ ವಿಶಿಷ್ಟ ಜಾತ್ರೆಯ ವೇಳೆ ಎರಡೂ ಗ್ರಾಮಸ್ಥರು ಮುಖಾಮುಖಿಯಾಗಿ ಪರಸ್ಪರ ಕಲ್ಲುಗಳನ್ನು ಎಸೆಯುವ ಧಾರ್ಮಿಕ ಯುದ್ಧದಲ್ಲಿ ಭಾಗವಹಿಸಿದವು.
ಜಾತ್ರೆಯ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತವು 58 ವೈದ್ಯರು ಮತ್ತು 200 ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ 6 ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿತು. ಸ್ಥಳದಲ್ಲಿ 600 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಜತೆಗೆ ಜನಸಂದಣಿಯನ್ನು ನಿಯಂತ್ರಿಸಲು ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು.
ಏನಿದು ಆಚರಣೆ?
2 ಗ್ರಾಮಗಳ ಮಧ್ಯೆ ಹರಿಯುವ ಜಾಮ್ ನದಿಯಲ್ಲಿ ಚಂಡಿ ಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಈ ಜಾತ್ರೆ ಪ್ರಾರಂಭವಾಗುತ್ತದೆ. ಬಳಿಕ ಸಂಪ್ರದಾಯದಂತೆ ಸಾವರ್ಗಾಂವ್ನ ಜನರು ಕಾಡಿನಿಂದ ಕಡಿದು ತಂದ ಪಲಾಶ್ ಮರವನ್ನು ಹೊತ್ತುಕೊಂಡು ನದಿಯ ಮಧ್ಯದಲ್ಲಿ ನೆಟ್ಟು ಅದನ್ನು ತಮ್ಮ ಪವಿತ್ರ ಧ್ವಜವೆಂದು ಭಾವಿಸುತ್ತಾರೆ. ಸಾವರ್ಗಾಂವ್ ಜನರು ಆ ಮರವನ್ನು ತಮ್ಮ ಮಗಳಂತೆ ರಕ್ಷಿಸುತ್ತಾರೆ. ಇತ್ತ ಹುಡುಗನ ಕಡೆಯವರನ್ನು ಪ್ರತಿನಿಧಿಸುವ ಪಂದುರ್ನಾ ಗ್ರಾಮಸ್ಥರು ಅದನ್ನು ವಶಪಡಿಸಿಕೊಳ್ಳಲು ಕಲ್ಲುಗಳ ದಾಳಿ ನಡೆಸುತ್ತಾರೆ. ಧ್ವಜ (ಮರ) ಮುರಿಯುವವರೆಗೂ ಘರ್ಷಣೆ ಮುಂದುವರಿಯುತ್ತದೆ. ನಂತರ ಎರಡೂ ಕಡೆಯವರು ಸೇರಿ ಪೂಜೆ ನಡೆಸುತ್ತಾರೆ.
ಈ ಸಂಪ್ರದಾಯದಿಂದ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. 1955ರಿಂದ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು ಅನೇಕರು ಕೈಕಾಲು ಮತ್ತು ದೃಷ್ಟಿ ಕಳೆದುಕೊಂಡಿದ್ದಾರೆ. ಅದಾಗ್ಯೂ ಈ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ.