ಧರ್ಮಸ್ಥಳಕ್ಕೆ ಆವಹೇಳನ: ವಕೀಲರ ಜೊತೆ ಬೆಳ್ತಂಗಡಿ ಠಾಣೆಗೆ ಹಾಜರಾದ ಯೂಟ್ಯೂಬರ್ ಸಮೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳಕ್ಕೆ ಅವಹೇಳನ ನಡೆಸಿದ ಆರೋಪದಲ್ಲಿ ತನ್ನ ಮೇಲೆ ದಾಖಲಾದ ಸುಮೋಟೋ ಪ್ರಕರಣಕ್ಕೆ ಸಂಬಂಧಿಸಿ ವಿವರಣೆ ನೀಡಲು ಯೂಟ್ಯೂಬರ್ ಸಮೀರ್ ಎಂ.ಡಿ. ಇಂದು ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದಾನೆ.

ಧರ್ಮಸ್ಥಳಕ್ಕೆ ಕುರಿತಂತೆ ಎಐ ವಿಡಿಯೋ ಮೂಲಕ ಅಪಪ್ರಚಾರ ನಡೆಸಿರುವ ಆರೋಪದಲ್ಲಿ ಈತನ ವಿರುದ್ಧ ಪೊಲೀಸರು ಸುಮಾರು ಒಂದು ತಿಂಗಳ ಹಿಂದೆ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ಅದಾದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎರಡೆರಡು ಬಾರಿ ಈತನಿಗೆ ನೋಟೀಸ್ ಕೂಡಾ ಜಾರಿ ಮಾಡಿದ್ದರು. ಆದರೆ ಸಮೀರ್ ನೋಟೀಸ್‌ಗಳಿಗೆ ಯಾವುದೇ ಉತ್ತರ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಆತನ ನಿವಾಸಕ್ಕೆ ತೆರಳಿದ್ದ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದರು. ಆದರೆ ಸಮೀರ್ ಪೊಲೀಸರಿಗೆ ಸಿಕ್ಕಿರಲಿಲ್ಲ. ಇತ್ತ ಬಂಧನ ಭೀತಿ ದಟ್ಟವಾದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಸಮೀರ್‌ಗೆ ನ್ಯಾಯಾಲಯ ಜಾಮೀನು ನೀಡಿತ್ತಲ್ಲದೆ ವಿಚಾರಣೆಗೆ ಸಹಕರಿಸಬೇಕು, ಸಾಕ್ಷಿ ನಾಶ ಮಾಡಬಾರದು ಸೇರಿದಂತೆ ಹಲವು ಷರತ್ತು ವಿಧಿಸಿತ್ತು.
ಇಂದು ವಕೀಲರ ಜೊತೆಗೆ ಬೆಳ್ತಂಗಡಿ ಠಾಣೆಗೆ ಆಗಮಿಸಿದ ಸಮೀರ್ ಬೆಳ್ತಂಗಡಿ ವೃತ್ತ ನಿರೀಕ್ಷಕರ ಮುಂದೆ ಹಾಜರಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!