ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ 3 ನೇ ತರಗತಿಯ ವಿದ್ಯಾರ್ಥಿ ಸಜೀವ ದಹನವಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಪಾಪಿಕ್ರುಂಗ್ ಸರ್ಕಾರಿ ವಸತಿ ಶಾಲೆಯ ಬಾಲಕರ ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಚಾಂಗೊ ಗ್ರಾಮದ ತಾಶಿ ಜೆಂಪೆನ್ (8) ಎಂದು ಗುರುತಿಸಲಾಗಿದೆ.
ಶಾಲೆಗೆ ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳು ಇಲ್ಲದ ಕಾರಣ ಗಾಯಾಳುಗಳನ್ನು ಸುಮಾರು 85 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪಶ್ಚಿಮ ಸಿಯಾಂಗ್ ಜಿಲ್ಲೆಯ ಆಲೊದಲ್ಲಿರುವ ವಲಯ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಅವಘಡಕ್ಕೆ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.