ಗರ್ಭಧಾರಣೆ ಜೀವನದ ಒಂದು ವಿಶೇಷ ಹಂತ. ಆದರೆ ಈ ಅವಧಿಯಲ್ಲಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ಬೆಳೆಯುತ್ತಿರುವ ಹೊಟ್ಟೆ, ದಣಿವು ಹಾಗೂ ಅನಾನುಕೂಲತೆಗಳು ಸಾಮಾನ್ಯ. ಇವುಗಳಲ್ಲಿ ನಿದ್ರಾಹೀನತೆ ಕೂಡ ಪ್ರಮುಖ ಸಮಸ್ಯೆಯಾಗಿದ್ದು, ಅನೇಕ ಗರ್ಭಿಣಿಯರು ರಾತ್ರಿ ಹೊತ್ತು ಸರಿಯಾದ ನಿದ್ರೆ ಪಡೆಯಲು ಕಷ್ಟಪಡುವರು. ಆದರೆ, ಕೆಲವು ಸರಳ ಜೀವನಶೈಲಿ ಬದಲಾವಣೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವೆಂದು ತಜ್ಞರು ಹೇಳುತ್ತಾರೆ.
ಲಘುವಾದ ವ್ಯಾಯಾಮ
ಗರ್ಭಾವಸ್ಥೆಯಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯುವುದು ಸರಿಯಾದ ವಿಧಾನವಲ್ಲ. ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ, ವೈದ್ಯರ ಸಲಹೆಯಂತೆ ಲಘು ವ್ಯಾಯಾಮ ಮಾಡುವುದರಿಂದ ದೇಹ ಚೈತನ್ಯದಿಂದ ಇರುತ್ತದೆ. ಇದು ರಾತ್ರಿ ಸುಲಭವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಒತ್ತಡ ನಿಯಂತ್ರಣ
ಆತಂಕ, ಒತ್ತಡ ಹಾಗೂ ಹೆರಿಗೆಯ ಭಯ ನಿದ್ರಾಹೀನತೆಗೆ ಕಾರಣವಾಗಬಹುದು. ಮನಸ್ಸನ್ನು ಶಾಂತವಾಗಿರಿಸಲು ಧ್ಯಾನ, ಉಸಿರಾಟ ವ್ಯಾಯಾಮ ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.
ನಿದ್ರೆಗೆ ಸಮಯ ನಿಗದಿಪಡಿಸಿ
ಪ್ರತಿದಿನ ಒಂದೇ ಸಮಯದಲ್ಲಿ ಮಲಗುವ ಮತ್ತು ಎಚ್ಚರಗೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಮಲಗುವ ಮುನ್ನ ಮೊಬೈಲ್, ಟಿವಿ ಹಾಗೂ ಕಂಪ್ಯೂಟರ್ಗಳನ್ನು ತಪ್ಪಿಸಬೇಕು. ಬೆಚ್ಚಗಿನ ಹಾಲು ಕುಡಿಯುವುದು ಅಥವಾ ಸ್ನಾನ ಮಾಡುವುದು ನಿದ್ರೆಗೆ ಸಹಕಾರಿ.
ತಪ್ಪಿಸಬೇಕಾದ ಆಹಾರಗಳು
ಮಲಗುವ ಮುನ್ನ ಹೆಚ್ಚು ಹೊತ್ತು ತಿನ್ನುವುದು, ಖಾರದ ಪದಾರ್ಥಗಳು, ಕೊಬ್ಬಿನ ಆಹಾರ ಹಾಗೂ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದು ನಿದ್ರೆಗೆ ಅಡ್ಡಿ ಉಂಟುಮಾಡುತ್ತದೆ. ಆದ್ದರಿಂದ ಇವುಗಳನ್ನು ಮಿತಿಗೊಳಿಸುವುದು ಸೂಕ್ತ.
ಹೆಚ್ಚುವರಿ ಜಾಗ್ರತೆ
ಮಗುವಿನ ಬೆಳವಣಿಗೆಯೊಂದಿಗೆ ಮೂತ್ರಕೋಶದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದ ಆಗಾಗ್ಗೆ ವಾಶ್ರೂಮ್ಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಸರಿಯಾದ ದ್ರವ ಸೇವನೆ ಹಾಗೂ ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದನ್ನು ಕಡಿಮೆ ಮಾಡುವುದು ಸಹಾಯಕರ.
ಗರ್ಭಾವಸ್ಥೆಯಲ್ಲಿ ಉತ್ತಮ ನಿದ್ರೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯಗತ್ಯ. ಲಘು ವ್ಯಾಯಾಮ, ಸರಿಯಾದ ಆಹಾರ ಪದ್ಧತಿ ಹಾಗೂ ಒತ್ತಡ ನಿಯಂತ್ರಣದ ಮೂಲಕ ನಿದ್ರಾಹೀನತೆಯನ್ನು ತಡೆಯಬಹುದು. ಯಾವಾಗಲೂ ವೈದ್ಯರ ಸಲಹೆ ಪಡೆದು ಕ್ರಮ ಕೈಗೊಳ್ಳುವುದು ಸುರಕ್ಷಿತ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)