FOOD | ಸಖತ್ ಟೇಸ್ಟಿ ಎಗ್ ದಮ್ ಬಿರಿಯಾನಿ! ನೀವೂ ಒಂದ್ಸಲ ಟ್ರೈ ಮಾಡಿ

ಬಿರಿಯಾನಿ ಎಂದರೆ ಯಾರಿಗಾದರೂ ಬಾಯಲ್ಲಿ ನೀರು ಬರೋದು ಖಂಡಿತ. ವಿಶೇಷವಾಗಿ ಮಸಾಲೆಯ ಸುವಾಸನೆಯ ಎಗ್ ಬಿರಿಯಾನಿ ಊಟದ ಮೇಜಿನಲ್ಲಿದ್ದರೆ, ಅದನ್ನು ಬಿಟ್ಟು ಬೇರೆ ತಿನಿಸುಗಳನ್ನು ನೋಡಲು ಮನಸ್ಸೇ ಬರುವುದಿಲ್ಲ. ಹೋಟೆಲ್‌ಗೆ ಹೋಗದೆ, ಮನೆಯಲ್ಲಿ ಸುಲಭವಾಗಿ ರೆಸ್ಟೋರೆಂಟ್ ಸ್ಟೈಲ್ ಎಗ್ ದಮ್ ಬಿರಿಯಾನಿ ಮಾಡೋದು ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಮೊಟ್ಟೆ – 5
ಬಾಸ್ಮತಿ ಅಕ್ಕಿ – ½ ಕೆಜಿ
ಈರುಳ್ಳಿ – 2
ಮೊಸರು – 2 ಟೀಸ್ಪೂನ್
ಹಸಿಮೆಣಸಿನಕಾಯಿ – 3
ದಾಲ್ಚಿನ್ನಿ – 2 ತುಂಡು
ಲವಂಗ – 4, ಏಲಕ್ಕಿ – 2, ಮರಾಠಿ ಮೊಗ್ಗು – 1
ಜೀರಿಗೆ – 1 ಟೀಸ್ಪೂನ್, ಶಾಜೀರಾ – ಒಂದು ಚಿಟಿಕೆ
ಬಿರಿಯಾನಿ ಎಲೆಗಳು – 3, ಬಿರಿಯಾನಿ ಹೂವು – 2
ಬಿರಿಯಾನಿ ಮಸಾಲಾ – 1 ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಫ್ರೆಶ್ ಕ್ರೀಮ್ – 2 ಟೀಸ್ಪೂನ್
ಅರಿಶಿನ, ಖಾರದ ಪುಡಿ, ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 3 ಟೀಸ್ಪೂನ್,
ತುಪ್ಪ – ಸ್ವಲ್ಪ
ಕೊತ್ತಂಬರಿ ಹಾಗೂ ಪುದೀನಾ ಸೊಪ್ಪು – ಒಂದು ಹಿಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮೆಟೊ ರಸ – ½ ಕಪ್
ಹಾಲು – ¼ ಕಪ್ + ಕೇಸರಿ
ಕಸೂರಿ ಮೇಥಿ – ಒಂದು ಚಿಟಿಕೆ
ಹುರಿದ ಈರುಳ್ಳಿ – ಸ್ವಲ್ಪ

ತಯಾರಿಸುವ ವಿಧಾನ

ಬಾಸ್ಮತಿ ಅಕ್ಕಿಯನ್ನು ತೊಳೆದು 30 ನಿಮಿಷ ನೆನೆಸಿಡಿ. ಈಗ ಬೇಯಿಸಿದ ಮೊಟ್ಟೆಗಳಿಗೆ ಅರಿಶಿನ, ಉಪ್ಪು, ಖಾರದ ಪುಡಿ ಹಚ್ಚಿ ಬಿಸಿ ಎಣ್ಣೆಯಲ್ಲಿ ಹುರಿದುಕೊಳ್ಳಿ. ಹಾಲಿಗೆ ಕೇಸರಿ ಸೇರಿಸಿ ಪಕ್ಕಕ್ಕೆ ಇಡಿ.

ನೀರನ್ನು ಕುದಿಸಿ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ, ಬಿರಿಯಾನಿ ಎಲೆ, ತುಪ್ಪ ಮತ್ತು ಉಪ್ಪು ಸೇರಿಸಿ ಅಕ್ಕಿಯನ್ನು 75% ಬೇಯಿಸಿ ಪಕ್ಕಕ್ಕೆ ಇಡಿ.

ಒಂದು ಪಾತ್ರೆಯಲ್ಲಿ ಎಣ್ಣೆ ಹಾಗೂ ತುಪ್ಪ ಹಾಕಿ ಮೊದಲು ಮೊಟ್ಟೆಗಳನ್ನು ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ರಸ ಸೇರಿಸಿ ಫ್ರೈ ಮಾಡಿ.

ಮಸಾಲೆಗೆ ಉಪ್ಪು, ಖಾರದ ಪುಡಿ, ಅರಿಶಿನ, ಕೊತ್ತಂಬರಿ ಪುಡಿ, ಮೊಸರು ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಹುರಿದ ಮೊಟ್ಟೆ, ಕೊತ್ತಂಬರಿ, ಪುದೀನಾ ಮತ್ತು ಕಸೂರಿ ಮೇಥಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣದ ಮೇಲೆ ಬಾಸ್ಮತಿ ಅಕ್ಕಿಯ ಒಂದು ಪದರು ಹಾಕಿ. ಮತ್ತೆ ಮೊಟ್ಟೆಯ ಮಸಾಲೆಯ ಪದರು, ನಂತರ ಉಳಿದ ಅಕ್ಕಿ ಹಾಸಿ.

ಮೇಲೆ ಕೇಸರಿ ಹಾಲು, ಕೊತ್ತಂಬರಿ, ಪುದೀನಾ ಹಾಗೂ ಹುರಿದ ಈರುಳ್ಳಿ ಚೆಲ್ಲಿರಿ. ಪಾತ್ರೆಯನ್ನು ಮುಚ್ಚಿ ಕಡಿಮೆ ಉರಿಯಲ್ಲಿ 15 ನಿಮಿಷ ದಮ್ ಮಾಡಿ. ಈಗ ರುಚಿಯಾದ ಎಗ್ ದಮ್ ಬಿರಿಯಾನಿ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!