ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋ, ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ನೌಕಾಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆಗಳ ಜಂಟಿ ಸಹಭಾಗಿತ್ವದಲ್ಲಿ, ಇಂಟಿಗ್ರೇಟೆಡ್ ಏರ್ ಡ್ರಾಪ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.
ಈ ಪರೀಕ್ಷೆಯಲ್ಲಿ, ಐಎಎಫ್‌ನ ಚಿನೂಕ್ ಹೆಲಿಕಾಪ್ಟರ್ ಬಂಗಾಳ ಕೊಲ್ಲಿಯಿಂದ ಸುಮಾರು 3 ಕಿ.ಮೀ ಎತ್ತರಕ್ಕೆ ಸಿಮ್ಯುಲೇಟೆಡ್ ಸಿಬ್ಬಂದಿ ಮಾಡ್ಯೂಲ್‌ನ್ನು ಹಾರಿಸಿತು. ಸುಮಾರು 4.5 ಟನ್ ತೂಕದ ಮಾಡ್ಯೂಲ್‌ನ್ನು ಸಮುದ್ರದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿತು.
ಗಗನಯಾನದ ಮೊದಲ ಸಿಬ್ಬಂದಿರಹಿತ ಕಾರ್ಯಾಚರಣೆ 2025ರ ಅಂತ್ಯದಲ್ಲಿ ನಡೆಯಲಿದ್ದು, ಇದರ ಭಾಗವಾಗಿ ಈ ಪ್ಯಾರಾಚೂಟ್ ಪರೀಕ್ಷೆ ನಡೆದಿದ್ದು, ಇಸ್ರೋ ತನ್ನ ಬಾಹ್ಯಾಕಾಶ ಕಾರ್ಯಾಚರಣೆಯತ್ತ ನಿರ್ಣಾಯಕ ಹೆಜ್ಜೆಯನ್ನಿಡುತ್ತಿದೆ.
https://x.com/isro/status/1959528237484376542/photo/1
ಈ ಕುರಿತು ಮಾತನಾಡಿರುವ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, “ಮಹತ್ವಾಕಾಂಕ್ಷಿ ಗಗನಯಾನ ಬಾಹ್ಯಾಕಾಶ ಕಾರ್ಯಾಚರಣೆ ಸಿದ್ಧತೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಇಂಟಿಗ್ರೇಟೆಡ್ ಏರ್ ಡ್ರಾಪ್ ಪರೀಕ್ಷೆ ನಮ್ಮ ನಿರೀಕ್ಷೆಯನ್ನು ಪೂರ್ಣಗೊಳಿಸಿದೆ” ಎಂದು ಹೇಳಿದ್ದಾರೆ.
“ಸಂಯೋಜಿತ ಏರ್ ಡ್ರಾಪ್ ಪರೀಕ್ಷೆಯಲ್ಲಿ ಒಟ್ಟು 10 ವಿಭಿನ್ನ ಪ್ಯಾರಾಚೂಟ್‌ಗಳು ಅನುಕ್ರಮವಾಗಿ ತೆರೆದು, ಸಿಬ್ಬಂದಿ ಮಾಡ್ಯೂಲ್‌ನ್ನು ನಿಧಾನವಾಗಿ ಲ್ಯಾಂಡಿಂಗ್ ವಲಯಕ್ಕೆ ಸುರಕ್ಷಿತವಾಗಿ ಕರೆತರುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ “ಎಂದು ಭಾರತದ ಅಗ್ರಗಣ್ಯ ಪ್ಯಾರಾಚೂಟ್ ಪರಿಣತಿ ಪ್ರಯೋಗಾಲಯವಾದ ಆಗ್ರಾದ ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ADRDE) ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗಗನಯಾತ್ರಿಗಳು ಭೂಮಿಗೆ ಹಿಂತಿರುಗಿದಾಗ, ಮೊದಲ ಪ್ಯಾರಾಚೂಟ್‌ಗಳು ಸಮುದ್ರದಿಂದ ಸುಮಾರು 7 ರಿಂದ 11 ಕಿ.ಮೀ ಎತ್ತರದಲ್ಲಿ ತೆರೆದುಕೊಳ್ಳುತ್ತವೆ. ಆ ಸಮಯದಲ್ಲಿ ಗಂಟೆಗೆ 700 ಕಿ.ಮೀ ವೇಗದಲ್ಲಿ ಭೂಮಿಯತ್ತ ಧಾವಿಸಿ ಬರುತ್ತಿರುವ ಸಿಬ್ಬಂದಿ ಮಾಡ್ಯೂಲ್, ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳಲು ಈ ಪ್ಯಾರಾಚೂಟ್ ನೆರವಾಗುತ್ತವೆ. ಸಿಬ್ಬಂದಿ ಮಾಡ್ಯೂಲ್‌ನ 10 ಪ್ಯಾರಾಚೂಟ್‌ಗಳು ಸ್ಪ್ಲಾಶ್ ಡೌನ್ ಮಾಡುವ ಮೊದಲು, ಸಿಬ್ಬಂದಿ ಮಾಡ್ಯೂಲ್‌ನ ವೇಗವನ್ನು ಸುಮಾರು 25 ಪಟ್ಟು ಕಡಿಮೆ ಮಾಡುತ್ತದೆ. ಅಂತಿಮ ಟಚ್‌ಡೌನ್‌ನಲ್ಲಿ, ಸಿಬ್ಬಂದಿ ಮಾಡ್ಯೂಲ್‌ನ ವೇಗವು ಗಂಟೆಗೆ ಸುಮಾರು 30 ಕಿ.ಮೀ. ಆಗಿರುತ್ತದೆ.