ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಅಪರೂಪವಾಗಿ ಮಾತ್ರ ನಡೆಯುವ ಸಾಧನೆಗಳನ್ನು ‘ಸು ಫ್ರಮ್ ಸೋ’ ಸಿನಿಮಾ ಮಾಡುತ್ತಿದೆ. ಬಿಡುಗಡೆಯಾಗಿ ಒಂದು ತಿಂಗಳಿಗಿಂತ ಹೆಚ್ಚು ದಿನ ಕಳೆದರೂ ಪ್ರೇಕ್ಷಕರ ಕ್ರೇಜ್ ಕಡಿಮೆಯಾಗಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ದಿನದಿಂದ ದಿನಕ್ಕೆ ಗಳಿಕೆ ಹೆಚ್ಚುತ್ತಿದ್ದು, ಸಿನಿಮಾ ನಿಜವಾದ ಬ್ಲಾಕ್‌ಬಸ್ಟರ್ ಹಾದಿಯಲ್ಲಿ ಮುನ್ನುಗ್ಗುತ್ತಿದೆ.
‘ಸು ಫ್ರಮ್ ಸೋ’ ಚಿತ್ರವು ಜುಲೈ 25ರಂದು ತೆರೆಕಂಡಿತ್ತು. ಬಿಡುಗಡೆಯಾದ ತಕ್ಷಣವೇ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದ ಈ ಸಿನಿಮಾ, ಅನೇಕ ಬಿಗ್ ಬಜೆಟ್ ಸಿನಿಮಾಗಳಿಗೂ ಪೈಪೋಟಿ ನೀಡುತ್ತಿದೆ. ವರದಿಗಳ ಪ್ರಕಾರ, 30ನೇ ದಿನ ಚಿತ್ರವು 1.47 ಕೋಟಿ ರೂ. ಗಳಿಸಿದ್ದು, 31ನೇ ದಿನ 1.75 ಕೋಟಿ ರೂ. ಕಲೆಕ್ಷನ್ ದಾಖಲಿಸಿದೆ. ಭಾರತದಲ್ಲಿ ಒಟ್ಟು ಕಲೆಕ್ಷನ್ ಈಗಾಗಲೇ 85.32 ಕೋಟಿಗೆ ತಲುಪಿದ್ದು, ವಿದೇಶದ ಗಳಿಕೆ ಸೇರಿ ಒಟ್ಟು 113.37 ಕೋಟಿ ರೂ. ದಾಟಿದೆ.
ಮಾಮೂಲಿ ಸಿನಿಮಾಗಳು ಮೊದಲ ವಾರದಲ್ಲಿ ಮಾತ್ರ ಅಬ್ಬರಿಸಿ ನಂತರ ಪ್ರೇಕ್ಷಕರ ಗಮನ ಕಳೆದುಕೊಳ್ಳುತ್ತವೆ. ಆದರೆ ‘ಸು ಫ್ರಮ್ ಸೋ’ಗೆ ಆ ಪರಿಸ್ಥಿತಿ ಎದುರಾಗಿಲ್ಲ. ತೆರೆಕಂಡ ‘ಕಿಂಗ್ಡಮ್’, ‘ಕೂಲಿ’, ‘ವಾರ್ 2’ ಮುಂತಾದ ಚಿತ್ರಗಳಿಗೆ ಬಲವಾದ ಪೈಪೋಟಿ ನೀಡುತ್ತಾ, ಈ ಸಿನಿಮಾ ತನ್ನ ಸದ್ದು ಕಡಿಮೆ ಮಾಡಿಲ್ಲ. ಪ್ರತಿಯೊಂದು ವೀಕೆಂಡ್‌ನಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹರಿದು ಬರುತ್ತಿರುವುದು ಇದಕ್ಕೆ ಸಾಕ್ಷಿ.
ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಜೆ.ಪಿ. ತುಮಿನಾಡು ನಿರ್ದೇಶಿಸಿದ್ದು, ಇದು ಅವರ ಮೊದಲ ಸಿನಿಮಾದರೂ ಕೂಡ ಬ್ಲಾಕ್‌ಬಸ್ಟರ್ ಯಶಸ್ಸು ಗಳಿಸಿದೆ. ರಾಜ್ ಬಿ. ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದಲ್ಲದೆ, ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ.
31 ದಿನಗಳ ನಂತರವೂ ತನ್ನ ಕ್ರೇಜ್ ಕಳೆದುಕೊಳ್ಳದೆ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿರುವ ‘ಸು ಫ್ರಮ್ ಸೋ’, ಕನ್ನಡ ಚಿತ್ರರಂಗದಲ್ಲಿ ಅಪರೂಪದ ಯಶಸ್ಸು ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಮುಂದಿನ ವಾರಗಳಲ್ಲೂ ಇದರ ಬಾಕ್ಸ್ ಆಫೀಸ್ ಅಬ್ಬರ ಮುಂದುವರಿಯುವ ಸಾಧ್ಯತೆ ಎದ್ದು ಕಾಣುತ್ತಿದೆ.