ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಡ್ರೀಮ್-11 ಕಂಪನಿ ಇದೀಗ ಬಿಸಿಸಿಐಗೆ ತಾವು ಮುಂದುವರಿಯುವುದಿಲ್ಲವೆಂದು ಅಧಿಕೃತವಾಗಿ ತಿಳಿಸಿದೆ. ಇದಕ್ಕೆ ಕಾರಣ, ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಲ್ಪಟ್ಟ ‘ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ’ಯಾಗಿದೆ. ಈ ನಿರ್ಧಾರದಿಂದ ಮುಂಬರುವ ಏಷ್ಯಾ ಕಪ್ಗೆ ಮುಂಚಿತವಾಗಿ ಬಿಸಿಸಿಐ ಹೊಸ ಪ್ರಾಯೋಜಕರನ್ನು ಘೋಷಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಡ್ರೀಮ್-11 ಹಿಂದೆ ಸರಿದ ನಂತರ ಜಪಾನ್ ಮೂಲದ ಟೊಯೋಟಾ ಮೋಟಾರ್ಸ್ ಕಾರ್ಪೊರೇಷನ್ ಹಾಗೂ ಒಂದು ಫಿನ್ಟೆಕ್ ಸ್ಟಾರ್ಟ್-ಅಪ್ ಸಂಸ್ಥೆಗಳು ಬಿಸಿಸಿಐ ಶೀರ್ಷಿಕೆ ಪ್ರಾಯೋಜಕರಾಗಲು ಆಸಕ್ತಿ ತೋರಿಸಿವೆ. ಆದರೆ ಅಧಿಕೃತ ಟೆಂಡರ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲವೆಂದು ತಿಳಿದುಬಂದಿದೆ.
ಡ್ರೀಮ್-11 ಪ್ರಾಯೋಜಕತ್ವದ ಲೋಗೋ ಹೊಂದಿದ ಜೆರ್ಸಿಗಳು ಈಗಾಗಲೇ ಮುದ್ರಿಸಲ್ಪಟ್ಟಿದ್ದರೂ, ಏಷ್ಯಾಕಪ್ನಲ್ಲಿ ಅವುಗಳನ್ನು ಬಳಸದೆ ಇರಲು ಬಿಸಿಸಿಐ ನಿರ್ಧರಿಸಿದೆ. ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು “ದೇಶದ ಕಾನೂನುಗಳನ್ನು ಬಿಸಿಸಿಐ ಕಟ್ಟುನಿಟ್ಟಾಗಿ ಪಾಲಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕೃತ ಘೋಷಣೆಗೆ ನಿರೀಕ್ಷೆ
ಡ್ರೀಮ್-11 ಪ್ರತಿನಿಧಿಗಳು ಬಿಸಿಸಿಐ ಕಚೇರಿಗೆ ಭೇಟಿ ನೀಡಿ ತಾವು ಜೆರ್ಸಿ ಪ್ರಾಯೋಜಕರಾಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲವೆಂದು ಸಿಇಒ ಹೇಮಾಂಗ್ ಅಮೀನ್ ಅವರಿಗೆ ತಿಳಿಸಿದ್ದಾರೆ. ಪರಿಣಾಮವಾಗಿ, ಬಿಸಿಸಿಐ ಶೀಘ್ರದಲ್ಲೇ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸಲಿದೆ.