ಏಷ್ಯಾ ಕಪ್ 2025ಕ್ಕೆ ಒಮಾನ್ ತಂಡ ಸಜ್ಜು: ಕ್ಯಾಪ್ಟನ್ ನಮ್ಮ ಇಂಡಿಯಾದವ್ರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಮಾನ್ ತಂಡವು ಏಷ್ಯಾ ಕಪ್ 2025ರಲ್ಲಿ ಭಾಗವಹಿಸಲು ಸಜ್ಜಾಗಿದೆ. ಸೆಪ್ಟೆಂಬರ್ 9 ರಿಂದ 28ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಈ ಟಿ20 ಟೂರ್ನಮೆಂಟ್‌ಗೆ ಒಮಾನ್ ತನ್ನ 17 ಸದಸ್ಯರ ತಂಡವನ್ನು ಘೋಷಿಸಿದ್ದು, ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಜತಿಂದರ್ ಸಿಂಗ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಒಮಾನ್ ಕ್ರಿಕೆಟ್ ತಂಡ ತನ್ನ ಶಕ್ತಿಯನ್ನು ಜಾಗತಿಕ ವೇದಿಕೆಯಲ್ಲಿ ತೋರಿಸಲು ಮಹತ್ವದ ಹೆಜ್ಜೆ ಇಟ್ಟಿದೆ.

ತಂಡದಲ್ಲಿ ಭಾರತೀಯ ಮತ್ತು ಪಾಕಿಸ್ತಾನಿ ಮೂಲದ ಅನೇಕ ಆಟಗಾರರಿಗೆ ಅವಕಾಶ ದೊರೆತಿದ್ದು, ನಾಲ್ಕು ಹೊಸ ಮುಖಗಳನ್ನು ಕೂಡ ಸೇರಿಸಲಾಗಿದೆ. ಜತಿಂದರ್ ಸಿಂಗ್ ಜೊತೆಗೆ ವಿನಾಯಕ್ ಶುಕ್ಲಾ, ಸಮಯ್ ಶ್ರೀವಾಸ್ತವ, ಆರ್ಯನ್ ಬಿಶ್ತ್, ಆಶಿಶ್ ಒಡೆಡೆರಾ, ಹಾಗೂ ಕರಣ್ ಸೋನಾವಾಲೆ ಭಾರತೀಯ ಮೂಲದ ಆಟಗಾರರಾಗಿ ಇದ್ದರೆ, ಮೊಹಮ್ಮದ್ ನದೀಮ್, ಅಮೀರ್ ಕಲೀಮ್, ಸುಫಿಯಾನ್ ಮೆಹಮೂದ್, ಹಸ್ನೈನ್ ಅಲಿ ಶಾ ಮತ್ತು ಮೊಹಮ್ಮದ್ ಇಮ್ರಾನ್ ಪಾಕಿಸ್ತಾನಿ ಮೂಲದವರು. ಹೊಸಬರಾದ ಸುಫಿಯಾನ್ ಯೂಸುಫ್, ಜಿಕ್ರಿಯಾ ಇಸ್ಲಾಂ, ಫೈಸಲ್ ಶಾ ಮತ್ತು ನದೀಮ್ ಖಾನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಜ್ಜಾಗಿದ್ದಾರೆ.

ತಂಡದ ಮುಖ್ಯ ಕೋಚ್ ದುಲೀಪ್ ಮೆಂಡಿಸ್, ಏಷ್ಯಾ ಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಆಡಲು ದೊರಕಿದ ಅವಕಾಶವನ್ನು ಸ್ವಾಗತಿಸಿದ್ದಾರೆ. “ಭಾರತ ಮತ್ತು ಪಾಕಿಸ್ತಾನದಂತಹ ತಂಡಗಳ ವಿರುದ್ಧ ಆಡುವುದು ಒಮಾನ್ ಕ್ರಿಕೆಟ್‌ಗೆ ಇತಿಹಾಸಿಕ ಕ್ಷಣ. ಈ ಅನುಭವದಿಂದ ನಮ್ಮ ಆಟಗಾರರು ತಾವು ಏನು ಮಾಡಲು ಸಾದ್ಯ ಎಂದು ತೋರಿಸಿಕೊಳ್ಳಬಹುದು,” ಎಂದು ಮೆಂಡಿಸ್ ಅಭಿಪ್ರಾಯಪಟ್ಟಿದ್ದಾರೆ.

ಒಮಾನ್ ತಂಡವನ್ನು ಗುಂಪು ಎಗೆ ಸೇರಿಸಲಾಗಿದ್ದು, ಭಾರತ, ಪಾಕಿಸ್ತಾನ ಹಾಗೂ ಆತಿಥೇಯ ಯುಎಇ ವಿರುದ್ಧ ಆಡಬೇಕಿದೆ. ಸೆಪ್ಟೆಂಬರ್ 12ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ, ಸೆಪ್ಟೆಂಬರ್ 15ರಂದು ಯುಎಇ ವಿರುದ್ಧ ಹಾಗೂ ಸೆಪ್ಟೆಂಬರ್ 19ರಂದು ಭಾರತದ ವಿರುದ್ಧ ಪ್ರಮುಖ ಪಂದ್ಯಗಳನ್ನು ಆಡಲಿದೆ. ಈ ಮೂರು ಪಂದ್ಯಗಳು ಒಮಾನ್‌ಗೆ ಕಠಿಣ ಸವಾಲಾಗಿದ್ದರೂ, ಸೂಪರ್ ಫೋರ್ ಹಂತ ತಲುಪಲು ನಿರ್ಣಾಯಕವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!