February 9, 2026
Monday, February 9, 2026
spot_img

ಸಂಸತ್ ನಲ್ಲಿ ಗದ್ದಲ: ಲೋಕಸಭೆ ನಾಳೆಗೆ ಮುಂದೂಡಿಕೆ, ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಇಂದು ಮತ್ತೆ ವಿರೋಧ ಪಕ್ಷದ ನಾಯಕ(ಎಲ್‌ಒಪಿ) ರಾಹುಲ್ ಗಾಂಧಿ ಮಾತನಾಡಲು ಅವಕಾಶ ನೀಡಬೇಕೆಂದು ತೀವ್ರ ಗದ್ದಲ ಉಂಟಾದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಎರಡು ಬಾರಿ ಮುಂದೂಡಿಕೆಯಾದ ನಂತರ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸಭೆ ಸೇರಿದಾಗ, ಸ್ಪೀಕರ್ ಸ್ಥಾನದಲ್ಲಿದ್ದ ಸಂಧ್ಯಾ ರೇ ಅವರು, ಕಾಂಗ್ರೆಸ್ ಸದಸ್ಯ ಶಶಿ ತರೂರ್ ಅವರಿಗೆ ಬಜೆಟ್ ಮೇಲಿನ ಚರ್ಚೆ ಆರಂಭಿಸುವಂತೆ ಕೇಳಿಕೊಂಡರು.

ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಪ್ರಾರಂಭಿಸುವ ಮೊದಲು ಕೆಲವು ಅಂಶಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ತರೂರ್ ಅವರು ಸ್ಪೀಕರ್ ಗೆ ತಿಳಿಸಿದರು. ರಾಹುಲ್ ಗಾಂಧಿ ಬಜೆಟ್ ಕುರಿತು ಮಾತನಾಡಲು ಬಯಸಿದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ರೇ ಹೇಳಿದರು.

ಈ ವೇಳೆ ರಾಹುಲ್ ಗಾಂಧಿ, ಬಜೆಟ್ ಚರ್ಚೆಗೆ ಮೊದಲು ಕೆಲವು ಅಂಶಗಳನ್ನು ಎತ್ತಲು ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಸ್ಪೀಕರ್ ಈಗ ತಮ್ಮ ಮಾತಿನಿಂದ ಹಿಂದೆ ಸರಿಯುತ್ತಿದ್ದಾರೆ ಎಂದರು.

ಈ ವೇಳೆ ಸಂಧ್ಯಾ ರೇ , ಯಾವುದೇ ಒಪ್ಪಂದದ ಬಗ್ಗೆ ನಮಗೆ ಮಾಹಿತಿ ಇಲ್ಲ ಮತ್ತು ಸೂಚನೆ ಇಲ್ಲದೆ ಯಾರಿಗೂ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಹಂತದಲ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಧ್ಯಪ್ರವೇಶಿಸಿ, ಅಂತಹ ಯಾವುದೇ ಒಪ್ಪಂದವಿಲ್ಲ ಮತ್ತು ಸ್ಪೀಕರ್ ಬಗ್ಗೆ ಎಲ್‌ಒಪಿ ಏನಾದರೂ ಹೇಳಲು ಬಯಸಿದರೆ, ಬಿರ್ಲಾ ಕೂಡ ಸದನದಲ್ಲಿ ಹಾಜರಿರಬೇಕು ಎಂದು ಹೇಳಿದರು . ಆದ್ರೆ ಎರಡೂ ಕಡೆಯವರು ತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ, ರೇ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ರಾಜ್ಯಸಭೆಯಲ್ಲಿ ಸಭಾತ್ಯಾಗ

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡದ ವಿಷಯವನ್ನು ಪ್ರಸ್ತಾಪಿಸಿ ಸಭಾತ್ಯಾಗ ಮಾಡಿದರು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಖರ್ಗೆ ಅವರು ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಲು ಎದ್ದುನಿಂತರು. ಆದರೆ ಲೋಕಸಭೆಗೆ ಸಂಬಂಧಿಸಿದ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಸಭಾಧ್ಯಕ್ಷ ಸಿ ಪಿ ರಾಧಾಕೃಷ್ಣನ್ ಅವರು ಖರ್ಗೆ ಅವರಿಗೆ ಅವಕಾಶ ನೀಡಲಿಲ್ಲ.

ಹೀಗಾಗಿ ಸಭಾಧ್ಯಕ್ಷರು ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡದ ಕಾರಣ, ಇಡೀ ವಿರೋಧ ಪಕ್ಷದ ಸದಸ್ಯರು ಎದ್ದು ನಿಂತು ಪ್ರತಿಭಟನೆ ನಡೆಸಿ, ಸದನದಿಂದ ಹೊರ ನಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !