ಹೊಸದಿಗಂತ ಯಲ್ಲಾಪುರ:
ಐತಿಹಾಸಿಕ ಹಿನ್ನೆಲೆಯ ಯಲ್ಲಾಪುರದ ಗ್ರಾಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಸಡಗರ-ಸಂಭ್ರಮದಿಂದ ಆರಂಭವಾಗಿದ್ದು, ಲಕ್ಷಾಂತರ ಭಕ್ತರ ದಂಡು ನಗರಕ್ಕೆ ಹರಿದುಬರುತ್ತಿದೆ. ಈ ಬಾರಿಯ ವಿಶೇಷವೆಂದರೆ, ಜನದಟ್ಟಣೆ ನಿರ್ವಹಿಸಲು ಮತ್ತು ಭಕ್ತರಿಗೆ ನೆರವಾಗಲು ಪೊಲೀಸ್ ಇಲಾಖೆಯು ‘ಕ್ಯೂಆರ್ ಕೋಡ್’ (QR Code) ತಂತ್ರಜ್ಞಾನವನ್ನು ಪರಿಚಯಿಸಿದೆ.
ಒಂದೇ ಸ್ಕ್ಯಾನ್‌ನಲ್ಲಿ ಸಿಗಲಿದೆ ಹತ್ತಾರು ಮಾಹಿತಿ: ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲೇ ಯಲ್ಲಾಪುರ ನಗರವಿರುವುದರಿಂದ ಪ್ರತಿವರ್ಷ ಜಾತ್ರೆಯ ವೇಳೆ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿತ್ತು. ಇದನ್ನು ತಡೆಯಲು ಈ ಬಾರಿ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಸ್ಕ್ಯಾನ್ ಮಾಡಿದ ತಕ್ಷಣ ಈ ಕೆಳಗಿನ ಮಾಹಿತಿಗಳು ಲಭ್ಯವಾಗಲಿವೆ:

ಭಾರಿ ವಾಹನಗಳು ಹಾಗೂ ಸಾಮಾನ್ಯ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳ ನಕಾಶೆ ಮತ್ತು ‘ನೋ ಪಾರ್ಕಿಂಗ್’ ವಲಯದ ಮಾಹಿತಿ.
ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆ, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ಹಾಗೂ ಪ್ರಥಮ ಚಿಕಿತ್ಸಾ ಕೇಂದ್ರಗಳ ನೇರ ಸಂಪರ್ಕ ವ್ಯವಸ್ಥೆ.
ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಪ್ರಮುಖ ಸ್ಥಳಗಳ ಮಾಹಿತಿ.
ಈ ಕುರಿತು ಮಾತನಾಡಿರುವ ಸಿಪಿಐ ರಮೇಶ ಹಾನಾಪುರ ಅವರು, “ಸಾರ್ವಜನಿಕರು ಈ ಕ್ಯೂಆರ್ ಕೋಡ್ ಬಳಸುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಿಸಲು ಸಹಕರಿಸಬೇಕು. ತಂತ್ರಜ್ಞಾನದ ಬಳಕೆಯಿಂದ ಯಾತ್ರಾರ್ಥಿಗಳು ಗೊಂದಲವಿಲ್ಲದೆ ಜಾತ್ರೆಯನ್ನು ಆನಂದಿಸಬಹುದು,” ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಈ ವಿನೂತನ ಪ್ರಯೋಗದಿಂದಾಗಿ ಯಲ್ಲಾಪುರ ಜಾತ್ರೆಯಲ್ಲಿ ಈ ಬಾರಿ ವಾಹನ ಸವಾರರು ಮತ್ತು ಭಕ್ತರು ನಿರಾಳವಾಗಿ ಓಡಾಡುವಂತಾಗಿದೆ.



