October 4, 2026
Sunday, October 4, 2026
spot_img

ಕ್ಯಾಂಡಿ ಪ್ಯಾಕೆಟ್‌ನಲ್ಲಿತ್ತು ಕಿಕ್.. ಕೋಟಿ ಕೋಟಿ ಮೌಲ್ಯದ ‘ಹೈಟೆಕ್’ ಗಾಂಜಾ ಕಸ್ಟಮ್ಸ್ ವಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೊಮ್ಮೆ ಮಾದಕ ವಸ್ತು ಸಾಗಾಟದ ಹಾಟ್‌ಸ್ಪಾಟ್ ಆಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇತ್ತೀಚೆಗೆ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬರೋಬ್ಬರಿ 3.40 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನ ಮೇಲೆ ಅನುಮಾನಗೊಂಡ ಅಧಿಕಾರಿಗಳು ಆತನ ಲಗೇಜ್ ತಪಾಸಣೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಹೊರಬಂದಿದೆ. ಸೂಟ್‌ಕೇಸ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬಚ್ಚಿಟ್ಟಿದ್ದ 9.7 ಕೆಜಿ ತೂಕದ ‘ಹೈಡ್ರೋಪೋನಿಕ್ ಗಾಂಜಾ’ ಪತ್ತೆಯಾಗಿದೆ. ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು ₹3.39 ಕೋಟಿ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ತಕ್ಷಣವೇ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ.

ಮತ್ತೊಂದು ಪ್ರಕರಣದಲ್ಲಿ, ಅದೇ ಬ್ಯಾಂಕಾಕ್‌ನಿಂದ ಬಂದಿದ್ದ ಇನ್ನೊಬ್ಬ ಪ್ರಯಾಣಿಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ವಿಭಿನ್ನ ಹಾದಿ ತುಳಿದಿದ್ದ. ಮೇಲ್ನೋಟಕ್ಕೆ ಸಾಮಾನ್ಯ ಕ್ಯಾಂಡಿ ಪ್ಯಾಕೆಟ್‌ಗಳಂತೆ ಕಾಣುತ್ತಿದ್ದ ಕವರ್‌ಗಳಲ್ಲಿ ಸುಮಾರು 1.7 ಕೆಜಿ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ತಪಾಸಣೆ ವೇಳೆ ಈ ಚಾಣಾಕ್ಷತನ ಬಯಲಾಗಿದ್ದು, ವಶಪಡಿಸಿಕೊಂಡ ವಸ್ತುವಿನ ಮೌಲ್ಯ ಸುಮಾರು ₹4.7 ಲಕ್ಷ ಎಂದು ತಿಳಿದುಬಂದಿದೆ.

ಸದ್ಯ ಕಸ್ಟಮ್ಸ್ ಅಧಿಕಾರಿಗಳು ಈ ಜಾಲದ ಹಿಂದೆ ಯಾರಿದ್ದಾರೆ ಮತ್ತು ಈ ಮಾದಕ ವಸ್ತುಗಳು ನಗರದ ಯಾರಿಗೆ ತಲುಪಬೇಕಿತ್ತು ಎಂಬ ಬಗ್ಗೆ ಆಳವಾದ ತನಿಖೆ ಕೈಗೊಂಡಿದ್ದಾರೆ.

Must Read