ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಮಾದಕವಸ್ತು ಸಾಗಣೆ ಜಾಲದಲ್ಲಿ ಪ್ರಮುಖ ಆರೋಪಿ ಎಂದು ತನಿಖಾ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದ್ದ ಪಂಜಾಬ್ ಮೂಲದ ನವ್‌ಪ್ರೀತ್ ಸಿಂಗ್‌ನನ್ನು ಟರ್ಕಿಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.
ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಶನಿವಾರ ಭಾರತಕ್ಕೆ ಕರೆತಂದು, ಮಾದಕವಸ್ತು ಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
‘ನವ್’ ಎಂಬ ಹೆಸರಿನಿಂದ ಪರಿಚಿತ
ನವ್‌ಪ್ರೀತ್ ಸಿಂಗ್ ‘ನವ್’ ಎಂಬ ಹೆಸರಿನಿಂದಲೂ ಪರಿಚಿತನಾಗಿದ್ದು, ಟರ್ಕಿಯಲ್ಲಿ ‘ನವಾಬ್ ವಿರ್ಕ್’ ಎಂಬ ನಕಲಿ ಗುರುತಿನಡಿ ವಾಸಿಸುತ್ತಿದ್ದ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ಟರ್ಕಿ ಪೌರತ್ವ ಪಡೆದಿದ್ದ ಆತ ಅಫ್ಘಾನಿಸ್ತಾನದಿಂದ ಹೆರಾಯಿನ್ ಮತ್ತು ಮೆಥಾಂಫೆಟಮೈನ್‌ಗಳನ್ನು ಭಾರತಕ್ಕೆ ಸಾಗಿಸುವ ಜಾಲದಲ್ಲಿ ತೊಡಗಿದ್ದ ಎಂದು ತನಿಖಾ ಸಂಸ್ಥೆಗಳ ಮಾಹಿತಿ ಆಧರಿಸಿ ಹೇಳಲಾಗಿದೆ. ಭಾರತೀಯ ಏಜೆನ್ಸಿಗಳು ಆತನ ನಿಜವಾದ ಗುರುತನ್ನು ಪತ್ತೆಹಚ್ಚಿ ಟರ್ಕಿ ಅಧಿಕಾರಿಗಳ ಸಹಕಾರದೊಂದಿಗೆ ಭಾರತಕ್ಕೆ ಕರೆತಂದಿವೆ.
ಎರಡು ವರ್ಷಕ್ಕೂ ಹೆಚ್ಚು ಕಾಲ ತಲೆಮರಿಸಿಕೊಂಡಿದ್ದ
34 ವರ್ಷದ ನವ್‌ಪ್ರೀತ್ ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಭಾರತದಲ್ಲಿನ ಜಾಲದ ಕಾರ್ಯಾಚರಣೆಯನ್ನು ಆತನ ಸಂಬಂಧಿ ಪ್ರಭ್‌ದೀಪ್ ಸಿಂಗ್ ಅಲಿಯಾಸ್ ‘ಹ್ಯಾರಿ’ ನೋಡಿಕೊಳ್ಳುತ್ತಿದ್ದ ಎಂದು ದೆಹಲಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. 2021ರಲ್ಲಿ ನಡೆದ ಭಾರಿ ಹೆರಾಯಿನ್ ವಶಪಡಿಸಿಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭ್‌ದೀಪ್ ವಿರುದ್ಧವೂ ತನಿಖೆ ನಡೆದಿದ್ದು, ಈ ವರ್ಷದ ಮೇನಲ್ಲಿ ಅಜರ್‌ಬೈಜಾನ್‌ನಿಂದ ಆತನನ್ನು ಭಾರತಕ್ಕೆ ಕರೆತರಲಾಗಿತ್ತು.
ಈ ಪ್ರಕರಣದ ತನಿಖೆಯ ವೇಳೆ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ತನಿಖೆ ವಿಸ್ತರಿಸಿದಂತೆ ಭಾರತ–ಅಫ್ಘಾನಿಸ್ತಾನ–ಟರ್ಕಿ ಸಂಪರ್ಕ ಹೊಂದಿರುವ ಅಂತರರಾಷ್ಟ್ರೀಯ ಮಾದಕವಸ್ತು ಜಾಲದ ಸುಳಿವುಗಳು ದೊರೆತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
288 ಆರೋಪಿಗಳು ಭಾರತಕ್ಕೆ ವಾಪಸ್
ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಮಾದಕವಸ್ತು ಪ್ರಕರಣಗಳ ಆರೋಪಿಗಳನ್ನು ಭಾರತಕ್ಕೆ ಕರೆತರುವ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಇಂಟರ್‌ಪೋಲ್ ವ್ಯವಸ್ಥೆಯ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರದ ಪ್ರಕಾರ, 2019ರಿಂದ 2026ರ ಆಗಸ್ಟ್‌ವರೆಗೆ 36 ದೇಶಗಳಿಂದ 288 ಪರಾರಿಯಾಗಿದ್ದ ಆರೋಪಿಗಳನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ.



