September 30, 2026
Wednesday, September 30, 2026
spot_img

ಸುಳ್ಳು ಭರವಸೆಗಳೇ ಕಾಂಗ್ರೆಸ್ ಬಂಡವಾಳ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಹೊಸದಿಗಂತ ಬೆಳಗಾವಿ:

“ರಾಜ್ಯದಲ್ಲಿ ಕಾಂಗ್ರೆಸ್ ನಿಜವಾಗಿಯೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ, ಅಧಿಕಾರಕ್ಕೆ ಬರಲು ಐದು ಗ್ಯಾರಂಟಿ ಯೋಜನೆಗಳ ಮೊರೆ ಹೋಗುವ ಅಗತ್ಯವಿರಲಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ರಾತ್ರಿ ಬೆಳಗಾವಿ ದಕ್ಷಿಣ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಕೇಂದ್ರ ಬಜೆಟ್ ಕುರಿತು ಮಹಿಳೆಯರೊಂದಿಗೆ ಸಂವಾದ’ ಹಾಗೂ ಪದ್ಮಶ್ರೀ ಪುರಸ್ಕೃತ ಪ್ರಭಾಕರ ಕೋರೆ ಅವರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ದಶಕಗಳ ಕಾಲ ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಆ ಕಾರಣಕ್ಕಾಗಿಯೇ ಕಳೆದ ಚುನಾವಣೆಯಲ್ಲಿ ಜನರನ್ನು ಸೆಳೆಯಲು ಸುಳ್ಳು ಗ್ಯಾರಂಟಿಗಳ ಮೊರೆ ಹೋಗಬೇಕಾಯಿತು ಎಂದು ಲೇವಡಿ ಮಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ನಾಯಕರು ಸುಳ್ಳು ಹರಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡಲಾಗದ ಇವರು ಕೇಂದ್ರದ ವಿರುದ್ಧ ಸುಳ್ಳು ಹೇಳುವುದನ್ನೇ ಸಾಧನೆ ಎಂದುಕೊಂಡಿದ್ದಾರೆ.

ಕಳೆದ 10-12 ವರ್ಷಗಳಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಕಾಲದ ಹದಗೆಟ್ಟ ಆರ್ಥಿಕತೆಯನ್ನು ಸುಧಾರಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ದಾರಿದೀಪವಾಗಿದೆ.

ಕೇಂದ್ರ ಸರ್ಕಾರದ ಯೋಜನೆಗಳು ಇಂದು ದೇಶದ ಪ್ರತಿಯೊಂದು ಗ್ರಾಮಕ್ಕೂ ತಲುಪಿವೆ. ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಏಳಿಗೆಯೇ ಮೋದಿ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.

Must Read