February 12, 2026
Thursday, February 12, 2026
spot_img

ಸಂಸತ್ತಿನಲ್ಲಿ ವ್ಯಾಪಾರ ಸಮರ: ರಾಹುಲ್ ಭಾಷಣಕ್ಕೆ ಬಿಜೆಪಿ ಕಿಡಿ, ಸದಸ್ಯತ್ವ ರದ್ದತಿಗೆ ಆಗ್ರಹ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಬಜೆಟ್ ಅಧಿವೇಶನವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಗ್ಯುದ್ಧಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಬಜೆಟ್ ಮತ್ತು ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣವು ಈಗ ಅವರ ಸಂಸದ ಸ್ಥಾನಕ್ಕೇ ಕುತ್ತು ತರುವ ಹಂತಕ್ಕೆ ಬಂದು ನಿಂತಿದೆ.

ಭಾರತ-ಯುಎಸ್ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಏಕಪಕ್ಷೀಯವಾಗಿದೆ. ಅಮೆರಿಕದ ಕೃಷಿ ಉತ್ಪನ್ನಗಳು ಭಾರತಕ್ಕೆ ಲಗ್ಗೆ ಇಡುವುದರಿಂದ ಸ್ಥಳೀಯ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರವು ‘ಭಾರತ ಮಾತೆ’ಯನ್ನು ಮಾರಾಟಕ್ಕಿಟ್ಟಿದೆ ಎಂದು ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರ ಭಾಷಣದ ಬೆನ್ನಲ್ಲೇ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ. ಪ್ರಮುಖವಾಗಿ ಸಂಸದ ನಿಶಿಕಾಂತ್ ದುಬೆ ಅವರು ರಾಹುಲ್ ವಿರುದ್ಧ ಗಂಭೀರ ದೂರನ್ನು ಸಲ್ಲಿಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಸೊರೊಸ್ ಫೌಂಡೇಶನ್ ಮತ್ತು ಫೋರ್ಡ್ ಫೌಂಡೇಶನ್‌ನಂತಹ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ವಿದೇಶಿ ಪ್ರವಾಸಗಳ ಮೂಲಕ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ ಎಂಬ ವಿವರಗಳನ್ನು ದುಬೆ ಸದನಕ್ಕೆ ಸಲ್ಲಿಸಿದ್ದಾರೆ.

ಜನವರಿ 28 ರಿಂದ ಆರಂಭವಾಗಿರುವ ಈ ಬಜೆಟ್ ಅಧಿವೇಶನವು ಏಪ್ರಿಲ್ 2 ರವರೆಗೆ ನಡೆಯಲಿದೆ. ಫೆಬ್ರವರಿ 13 ರಿಂದ ಮಾರ್ಚ್ 9 ರವರೆಗೆ ಅಧಿವೇಶನಕ್ಕೆ ವಿರಾಮವಿರಲಿದ್ದು, ಈ ಸಮಯದಲ್ಲಿ ವಿವಿಧ ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಸ್ಥಾಯಿ ಸಮಿತಿಗಳು ಪರಿಶೀಲಿಸಲಿವೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಆತ್ಮಚರಿತ್ರೆ ಕುರಿತಾದ ಚರ್ಚೆಯ ನಡುವೆಯೇ ರಾಹುಲ್ ಗಾಂಧಿ ಅವರ ಈ ಭಾಷಣ ಈಗ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !