April 15, 2026
Wednesday, April 15, 2026
spot_img

ಮೆಟ್ರೋ ‘ರೆಡ್ ಲೈನ್’ಗೆ ಕೇಂದ್ರದ ರೆಡ್ ಸಿಗ್ನಲ್: ಸರ್ಜಾಪುರ-ಹೆಬ್ಬಾಳ ಕನಸಿಗೆ ಸದ್ಯಕ್ಕಿಲ್ಲ ವೇಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಮೆಟ್ರೋ ದರ ಏರಿಕೆ ಕುರಿತಾದ ಚರ್ಚೆಗಳ ನಡುವೆಯೇ, ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ (ರೆಡ್ ಲೈನ್) ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಆಕ್ಷೇಪ ವ್ಯಕ್ತಪಡಿಸಿದೆ. ಸುಮಾರು 28,405 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ವಿವರವಾದ ವರದಿ ಇದೀಗ ಮರುಪರಿಶೀಲನೆಗೆ ಒಳಪಡುವ ಅನಿವಾರ್ಯತೆ ಎದುರಾಗಿದೆ.

ಈ ಕಾರಿಡಾರ್‌ನಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಹಾಗೂ ಮೆಟ್ರೋ ಯೋಜನೆಯನ್ನು ಕೈಗೊಳ್ಳುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಆತಂಕವನ್ನು ಕೇಂದ್ರ ವ್ಯಕ್ತಪಡಿಸಿದೆ.

ಇಡೀ ಮಾರ್ಗದುದ್ದಕ್ಕೂ ಡಬಲ್ ಡೆಕ್ಕರ್ ಬದಲಾಗಿ, ಕೇವಲ ಅಗತ್ಯವಿರುವ ಪ್ರಮುಖ ಜಂಕ್ಷನ್‌ಗಳಲ್ಲಿ ಮಾತ್ರ ಇದನ್ನು ಅಳವಡಿಸಲು ಸೂಚಿಸಲಾಗಿದೆ.

ಬೃಹತ್ ಮೊತ್ತದ ಯೋಜನೆಯಲ್ಲಿ ತಾಂತ್ರಿಕ ಬದಲಾವಣೆಗಳನ್ನು ಮಾಡಿ, ಮರುಪರಿಶೀಲಿಸಿದ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

37 ಕಿಲೋಮೀಟರ್ ಉದ್ದದ ಈ ಕೆಂಪು ಮಾರ್ಗವು ಐಟಿ ಕಾರಿಡಾರ್ ಮತ್ತು ಉತ್ತರ ಬೆಂಗಳೂರನ್ನು ಬೆಸೆಯುವ ಮಹತ್ವದ ಕೊಂಡಿಯಾಗಿತ್ತು. 28 ನಿಲ್ದಾಣಗಳು ಹಾಗೂ 4 ಇಂಟರ್-ಚೇಂಜ್ ಪಾಯಿಂಟ್ ಹೊಂದಿದ್ದ ಈ ಯೋಜನೆ 2031ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಈಗ ಕೇಂದ್ರದ ತಗಾದೆಯಿಂದಾಗಿ ಕಾಮಗಾರಿ ಆರಂಭವಾಗುವುದು ಮತ್ತಷ್ಟು ತಡವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಇದು ರಾಜ್ಯ ಮತ್ತು ಕೇಂದ್ರದ ನಡುವಿನ ರಾಜಕೀಯ ಸಂಘರ್ಷಕ್ಕೂ ಕಾರಣವಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !