ಹೊಸದಿಗಂತ ಡಿಜಿಟಲ್ ಡೆಸ್ಕ್:
ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡುವುದನ್ನು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಎಲ್ಲಾ ಶಾಲೆಗಳಲ್ಲಿ ಹಾಡುವುದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯಪಡಿಸಿದೆ.
ಇತ್ತ ಈ ಆದೇಶಕ್ಕೆ ಮುಸ್ಲಿಂ ಸಂಘಟನೆ ಜಮಿಯತ್ ಉಲಮಾ-ಇ-ಹಿಂದ್ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ‘ಏಕಪಕ್ಷೀಯ’ ಮತ್ತು ‘ನಿರಂಕುಶ’ ಎಂದು ಗುರುವಾರ ಹೇಳಿದೆ.
ಈ ಕುರಿತು ಮಾತನಾಡಿರುವ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ವಂದೇ ಮಾತರಂ ಹಾಡುವುದು ಅಥವಾ ನುಡಿಸುವುದಕ್ಕೆ ಮುಸ್ಲಿಮರು ಯಾರು ತಡೆಯುವುದಿಲ್ಲ. ಆದರೆ ಗೀತೆಯ ಕೆಲವು ಪದ್ಯಗಳು ಮಾತೃಭೂಮಿಯನ್ನು ದೇವತೆಯಾಗಿ ಬಿಂಬಿಸುವ ನಂಬಿಕೆಗಳನ್ನು ಆಧರಿಸಿವೆ. ಇದು ಏಕದೇವತಾವಾದಿ ಧರ್ಮಗಳ ಮೂಲಭೂತ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಮರು ಮಾತ್ರ ಅಲ್ಲಾನನ್ನು ಪೂಜಿಸುತ್ತಾರೆ. ಈ ಗೀತೆ ಹಾಡಲು ಒತ್ತಾಯಿಸುವುದು ಸಂವಿಧಾನದ 25 ನೇ ವಿಧಿ ಮತ್ತು ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಾಡನ್ನು ನಾಗರಿಕರ ಮೇಲೆ ಹೇರಲು ಪ್ರಯತ್ನಿಸುವುದು ದೇಶಭಕ್ತಿಯ ಅಭಿವ್ಯಕ್ತಿಯಲ್ಲ, ಬದಲಿಗೆ ಇದು ಚುನಾವಣಾ ರಾಜಕೀಯ, ಮತೀಯ ಅಜೆಂಡಾ ಮತ್ತು ಕೆಲವು ಮೂಲಭೂತ ಸಮಸ್ಯೆಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದು ಮದನಿ ಹೇಳಿದ್ದಾರೆ.
ವಂದೇ ಮಾತರಂ ಕಡ್ಡಾಯಗೊಳಿಸುವುದು ಸಂವಿಧಾನ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ತತ್ವಗಳ ಮೇಲಿನ ಸ್ಪಷ್ಟ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.



