October 4, 2026
Sunday, October 4, 2026
spot_img

ಗೃಹ ಸಚಿವರ ತವರು ಜಿಲ್ಲೆಯಲ್ಲೇ ಲಂಚಾವತಾರ: ಬೇಲ್ ಹೆಸರಲ್ಲಿ ಹಣ ಪಡೆಯುತ್ತಿದ್ದ ಕಾನ್ಸ್‌ಟೇಬಲ್ ‘ಲೋಕಾ’ ಬಲೆಗೆ

ಹೊಸದಿಗಂತ ವರದಿ ಕಲಬುರಗಿ:

ನ್ಯಾಯಾಲಯದಿಂದ ಜಾಮೀನು ಪಡೆದ ವ್ಯಕ್ತಿಗೆ ಅನಗತ್ಯವಾಗಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಒತ್ತಡ ಹೇರಿ, ಬೇಲ್ ರದ್ದು ಮಾಡುವುದಾಗಿ ಬೆದರಿಸಿ ₹3 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಅನಿಲ್ ಕುಮಾರ್ ಅವರನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.

ಗಡಿಕೇಶ್ವರ ಗ್ರಾಮದ ಚಂದ್ರಕಾಂತ್ ರಂಗನೂರು ಅವರು ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಪ್ರಕಾರ, ನ್ಯಾಯಾಲಯವು ಪ್ರತಿ ತಿಂಗಳು ಸುಲೇಪೇಟ್ ಪೊಲೀಸ್ ಠಾಣೆಯ ತನಿಖಾಧಿಕಾರಿಯವರ ಮುಂದೆ ಹಾಜರಾಗುವಂತೆ ಜಾಮೀನು ಷರತ್ತು ವಿಧಿಸಿತ್ತು. ಆದರೆ ಠಾಣೆಯ ರೈಟರ್ ಆಗಿರುವ ಅನಿಲ್ ಕುಮಾರ್ ಅವರು ಪ್ರತಿ ರವಿವಾರ ಠಾಣೆಗೆ ಬಂದು ಹಾಜರಾತಿ ನೀಡುವಂತೆ ಒತ್ತಾಯಿಸುತ್ತಿದ್ದು, ಇಲ್ಲವಾದರೆ ಬೇಲ್ ರದ್ದು ಮಾಡಿಸಿ ಮತ್ತೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಪ್ರತಿ ವಾರ ಪೊಲೀಸ್ ಠಾಣೆಗೆ ಅಲೆದಾಡುವುದನ್ನು ತಪ್ಪಿಸಲು ಅನಿಲ್ ಕುಮಾರ್ ಅವರು ಮಧ್ಯವರ್ತಿಯಾಗಿ ಕೃಷ್ಣ ಎಂಬುವರ ಮೂಲಕ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅದರಂತೆ ಕೃಷ್ಣ ಅವರ ಮೊಬೈಲ್ ಸಂಖ್ಯೆಗೆ ಫೋನ್‌ಪೇ ಮೂಲಕ ₹3 ಸಾವಿರ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ದೂರಿನ ಪರಿಶೀಲನೆ ನಡೆಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದರು. ಲಂಚದ ಹಣ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ತನಿಖಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

Must Read