ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ್ ಚರಣ್ ಮತ್ತು ಉಪಾಸನಾ ದಂಪತಿಯ ಬದುಕಿನಲ್ಲಿ ಈಗ ಸಂಭ್ರಮದ ಕಾಲ. ಇತ್ತೀಚೆಗಷ್ಟೇ ಈ ದಂಪತಿ ಅವಳಿ ಮಕ್ಕಳಿಗೆ ಪಾಲಕರಾಗಿದ್ದು, ಇದೀಗ ಆ ಮಕ್ಕಳಿಗೆ ಇಟ್ಟಿರುವ ವಿಶೇಷ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಮೊದಲ ಮಗಳಿಗೆ ‘ಕ್ಲಿನ್ ಕಾರ’ ಎಂದು ವಿಭಿನ್ನವಾಗಿ ಹೆಸರಿಟ್ಟಿದ್ದ ಈ ಜೋಡಿ, ಈ ಬಾರಿ ದೈವಿಕ ಹಿನ್ನೆಲೆಯುಳ್ಳ ಹೆಸರುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ರಾಮ್ ಚರಣ್ ಅವರು ಖ್ಯಾತ ಜ್ಯೋತಿಷಿಗಳ ಸಲಹೆಯಂತೆ ತಮ್ಮ ಮಕ್ಕಳಿಗೆ ಹೆಸರಿಟ್ಟಿದ್ದಾರೆ.
ಶಿವ ಮತ್ತು ರಾಮ ಎಂಬ ಇಬ್ಬರು ದೇವತೆಗಳ ಸಮ್ಮಿಲನವೇ ಈ ‘ಕೊನಿಡೆಲಾ ಶಿವರಾಮ್’. ಮಗನಿಗೆ ಪವಿತ್ರವಾದ ದೇವರ ಹೆಸರಿಟ್ಟಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಮಗಳಿಗೆ ‘ಅನ್ವೀರಾ ದೇವಿ’ ಎಂದು ಹೆಸರಿಸಲಾಗಿದ್ದು, ಈ ಹೆಸರು ಪ್ರಾಚೀನ ಸಂಸ್ಕೃತಿಯಲ್ಲಿ ‘ಧೈರ್ಯ’ ಮತ್ತು ‘ಕೃಪೆ’ಯ ಸಂಕೇತವೆಂದು ಪರಿಗಣಿಸಲಾಗಿದೆ.
ವೈಯಕ್ತಿಕ ಜೀವನದ ಈ ಸಂಭ್ರಮದ ನಡುವೆಯೇ ವೃತ್ತಿಜೀವನದಲ್ಲೂ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಇದೇ ಏಪ್ರಿಲ್ 30ರಂದು ತೆರೆಗೆ ಬರಲು ಸಿದ್ಧವಾಗಿದೆ. ಒಂದೆಡೆ ಮನೆಯಲ್ಲಿ ಮಕ್ಕಳ ಕಿಲಕಿಲ ರವವಾದರೆ, ಇನ್ನೊಂದೆಡೆ ಬೆಳ್ಳಿ ಪರದೆಯ ಮೇಲೆ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.



