September 6, 2026
Sunday, September 6, 2026
spot_img

ಬಾಕ್ಸ್ ಆಫೀಸ್‌ನಲ್ಲಿ ಡಲ್ ಹೊಡೆದ ‘ಟಾಕ್ಸಿಕ್’: 4 ವರುಷದ ಕಾಯುವಿಕೆಗೆ ಸಿಗಲಿಲ್ಲವೇ ಗೆಲುವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಧಮಾಕಾ ಮಾಡುತ್ತೆ ಅಂದುಕೊಂಡಿದ್ದ ರಾಕಿ ಭಾಯ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾ, ಈಗ ಎರಡನೇ ವಾರಕ್ಕೇ ತಣ್ಣಗಾಗಿಬಿಟ್ಟಿದೆ. ಬಿಡುಗಡೆಯಾಗಿ ಭಾರಿ ಸದ್ದು ಮಾಡಬೇಕಿದ್ದ ಈ ಬಿಗ್ ಬಜೆಟ್ ಸಿನಿಮಾ, ಎರಡನೇ ಶುಕ್ರವಾರ ಬರುವಷ್ಟರಲ್ಲಿ ಭಾರಿ ಮುಖಭಂಗ ಅನುಭವಿಸಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ ಕಲೆಕ್ಷನ್ ಆಗಿದ್ದು ಬರಿ 60 ಲಕ್ಷ ರೂಪಾಯಿ. ಅಂದರೆ ಗುರುವಾರಕ್ಕೆ ಹೋಲಿಸಿದರೆ ಶೇಕಡಾ 75 ರಷ್ಟು ಕುಸಿತ ಕಂಡಿದೆ.

ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ಓಟಿಟಿ ಮತ್ತು ಥಿಯೇಟರ್‌ನಲ್ಲಿ ಒಂದೇ ಬಾರಿಗೆ ಲಗ್ಗೆ ಇಟ್ಟ ಹೊಸ ಕಂಟೆಂಟ್. ಒಂದೆಡೆ ಒಟಿಟಿಯಲ್ಲಿ ಸಕತ್ ಹೈಪ್ ಸೃಷ್ಟಿಸಿದ್ದ ‘ಮಿರ್ಜಾಪುರ್’ ಅಬ್ಬರ, ಇನ್ನೊಂದೆಡೆ ಥಿಯೇಟರ್‌ನಲ್ಲಿ ಧೂಳೆಬ್ಬಿಸುತ್ತಿರೋ ‘ಹನುಮಾನ್ ಅಂಶ್’ ಸಿನಿಮಾದ ಹವಾ. ಈಗಿರೋ ಟ್ರೆಂಡ್ ನೋಡಿದ್ರೆ ಸಿನಿಮಾ ತನ್ನ ಅಂತಿಮ ಓಟದ ಹಂತಕ್ಕೆ ಬಂದು ತಲುಪಿದೆ ಅಂತಲೇ ಹೇಳ್ಬಹುದು.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಡ್ರಾಮಾ, 10 ದಿನಗಳ ಒಟ್ಟು ಗಳಿಕೆಯಲ್ಲಿ ದೇಶಾದ್ಯಂತ ಗಳಿಸಿದ್ದು 128.60 ಕೋಟಿ ರೂಪಾಯಿ ಮಾತ್ರ. ಈ ವಾರಾಂತ್ಯಕ್ಕೆ ಹೇಗೋ 130 ಕೋಟಿ ಕ್ಲಬ್ ತಲುಪಬಹುದು. ಆದ್ರೆ ಲೈಫ್‌ಟೈಮ್ ಕಲೆಕ್ಷನ್ ನೋಡಿದರೆ 333 ಕೋಟಿ ರೂಪಾಯಿಗೆ ಬಿಸಿನೆಸ್ ಮುಗಿಯುವ ಲಕ್ಷಣ ಎದ್ದು ಕಾಣುತ್ತಿದೆ. ಕೋಟಿ ಕೋಟಿ ಸುರಿದು ಅದ್ದೂರಿಯಾಗಿ ನಿರ್ಮಿಸಿದ್ದ ಈ ಸಿನಿಮಾಗೆ ಇದು ನಿಜಕ್ಕೂ ಚೇತರಿಸಿಕೊಳ್ಳಲಾಗದ ನಷ್ಟವೇ ಸರಿ.

ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಅವರಂತಹ ದೊಡ್ಡ ತಾರಾಗಣವೇ ಇತ್ತು. ಸುಮಾರು 4 ವರ್ಷಗಳ ಸುದೀರ್ಘ ಬಿಡುವಿನ ನಂತರ ಯಶ್ ಅವರನ್ನು ಬೆಳ್ಳಿಪರದೆ ಮೇಲೆ ನೋಡಲು ಫ್ಯಾನ್ಸ್ ಸಿಕ್ಕಾಪಟ್ಟೆ ವೇಟ್ ಮಾಡಿದ್ರು. ಆದ್ರೆ ಕಥೆ ಮತ್ತು ನಿರೂಪಣೆ ಪ್ರೇಕ್ಷಕರ ಮನಸ್ಸಿಗೆ ಅಷ್ಟಾಗಿ ಹತ್ತಿರವಾಗಲಿಲ್ಲ.

‘ಟಾಕ್ಸಿಕ್’ ರಿಸಲ್ಟ್ ಏನೇ ಇರಲಿ, ಯಶ್ ಅಭಿಮಾನಿಗಳು ಮಾತ್ರ ಬೇಸರ ಮಾಡಿಕೊಳ್ಳಬೇಕಿಲ್ಲ. ಯಾಕಂದ್ರೆ ಯಶ್ ಅವರ ಮುಂದಿನ ಮೆಗಾ ಬಜೆಟ್ ಸಿನಿಮಾ ‘ರಾಮಾಯಣ’ 2026ರ ದೀಪಾವಳಿಗೆ ರಿಲೀಸ್ ಆಗ್ತಿದೆ. ಆ ಸಿನಿಮಾದಲ್ಲಿ ರಾಕಿ ಭಾಯ್ ಖಂಡಿತ ಕಂಬ್ಯಾಕ್ ಮಾಡ್ತಾರೆ ಅನ್ನೋ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !