ಹೊಸದಿಗಂತ ವರದಿ, ಮಂಗಳೂರು:
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಂದ ಒಟ್ಟು 17.95 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲ ಬಸ್ತಿಪಡ್ಪುವಿನ ಮುಸ್ತಫಾ ಸೀದಿಯಬ್ಬ(34) ಉಳ್ಳಾಲ ಡಿ ರೋಡ್ ಕೋಡಿಯ ಮೈಯದ್ದಿ(28), ಉಳ್ಳಾಲ ಮುಕ್ಕಚ್ಚೇರಿಯ ಮೊಹಮ್ಮದ್ ಶಿಫಾನ್(28) ಬಂಧಿತರು. ಆರೋಪಿಗಳು ಬೆಂಗಳೂರು ನಗರದಿಂದ ಮಾದಕ ವಸ್ತುಗಳನ್ನು ತಂದು ಉಳ್ಳಾಲ ತಾಲೂಕಿನ ತಲಪಾಡಿಯ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಈ ಹಿಂದೆ ಕೂಡ ದನಗಳ್ಳತನ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಗಳಿಂದ ರೂ.11,90,000 ಮೌಲ್ಯದ 118.13 ಗ್ರಾಂ ತೂಕದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ, ಮೊಬೈಲ್ ಫೋನ್-4, ಸ್ವಿಪ್ಟ್ ಕಾರು ಸಹಿತ ಒಟ್ಟು ರೂ. 17,95000 ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮುಸ್ತಫಾ ಸೀದಿಯಬ್ಬ ಎಂಬಾತನ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಮತ್ತು ಮೈಯದ್ದಿ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಬಂಧಿತ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.



