ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿದ್ದರೂ, ಅದರ ದುಬಾರಿ ಬೆಲೆ ನೋಡಿದಾಗ ಖರೀದಿಸಲು ಹಿಂಜರಿಯುವವರೇ ಹೆಚ್ಚು. ಆದರೆ ಸ್ವಲ್ಪ ಸಮಯ ಮತ್ತು ಕಾಳಜಿ ತೆಗೆದುಕೊಂಡರೆ, ಈ ಹಣ್ಣನ್ನು ನಿಮ್ಮ ಮನೆಯ ಬಾಲ್ಕನಿಯಲ್ಲೇ ಸುಲಭವಾಗಿ ಬೆಳೆಸಬಹುದು. ಸುಂದರವಾದ ಹೂವುಗಳ ಜೊತೆಗೆ ರುಚಿಕರವಾದ ಹಣ್ಣುಗಳನ್ನು ನೀಡುವ ಈ ಸಸ್ಯವು ಕುಂಡಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಬೀಜದಿಂದ ಬೆಳೆಸುವುದಕ್ಕಿಂತ, ಆರೋಗ್ಯಕರ ಕಾಂಡದ ತುಂಡನ್ನು ತೆಗೆದು ನೆಡುವುದು ಉತ್ತಮ. ಸುಮಾರು 10–12 ಇಂಚು ಉದ್ದದ ಕಾಂಡವನ್ನು 2–3 ದಿನ ನೆರಳಿನಲ್ಲಿ ಒಣಗಿಸಿ ನಂತರ ಮಣ್ಣಿನಲ್ಲಿ ನೆಟ್ಟರೆ ಬೇಗ ಬೆಳೆದು ಹಣ್ಣು ಕೊಡುತ್ತದೆ. ಗಿಡದ ಬೇರುಗಳು ಆಳವಾಗಿ ಬೆಳೆಯುವ ಕಾರಣ, ಕನಿಷ್ಠ 18–24 ಇಂಚು ಗಾತ್ರದ ಗಟ್ಟಿ ಕುಂಡ ಬಳಸುವುದು ಸೂಕ್ತ. ಮಣ್ಣಿನಲ್ಲಿ ತೋಟದ ಮಣ್ಣು, ಮರಳು, ಕಾಂಪೋಸ್ಟ್ ಮತ್ತು ಕೊಕೊಪೀಟ್ ಮಿಶ್ರಣ ಮಾಡಿದ್ದರೆ ನೀರು ನಿಲ್ಲದೇ ಬೇರುಗಳು ಆರೋಗ್ಯಕರವಾಗಿರುತ್ತವೆ.
ಇದನ್ನೂ ಓದಿ
ಈ ಗಿಡ ಒಂದು ಏರುವ ಸಸ್ಯವಾಗಿರುವುದರಿಂದ, ಬೆಳೆಯುವಾಗ ಬೆಂಬಲಕ್ಕಾಗಿ ಕೋಲು ಅಥವಾ ಪೈಪ್ ಕಟ್ಟಿ ಮೇಲಕ್ಕೆ ಹತ್ತಿಸುವುದು ಅಗತ್ಯ. ದಿನಕ್ಕೆ 6–8 ಗಂಟೆಗಳಷ್ಟು ಸೂರ್ಯನ ಬೆಳಕು ಸಿಗುವ ಸ್ಥಳದಲ್ಲಿ ಇಡಬೇಕು. ಮಣ್ಣಿನ ಮೇಲ್ಭಾಗ ಒಣಗಿದಾಗ ಮಾತ್ರ ನೀರು ಹಾಕಬೇಕು; ಅತಿಯಾದ ನೀರು ಬೇರುಗಳನ್ನು ಹಾನಿಗೊಳಿಸಬಹುದು.
ಹೂವುಗಳು ಅರಳಿದಾಗ ಕೈಯಿಂದ ಪರಾಗಸ್ಪರ್ಶ ಮಾಡಿದರೆ 30–40 ದಿನಗಳಲ್ಲಿ ಹಣ್ಣು ಸಿದ್ಧವಾಗುತ್ತದೆ. ಸ್ವಲ್ಪ ತಾಳ್ಮೆ ಇದ್ದರೆ, ನಿಮ್ಮ ಬಾಲ್ಕನಿಯೇ ಸಣ್ಣ ಹಣ್ಣಿನ ತೋಟವಾಗಿ ಮಾರ್ಪಾಡು ಮಾಡಬಹುದು.



