February 14, 2026
Saturday, February 14, 2026
spot_img

ಸೂಪರ್-8 ಟಿಕೆಟ್‌ಗಾಗಿ ‘ಮಹಾ’ ಸಮರ: ಸೂರ್ಯಕುಮಾರ್ ಕೊಟ್ಟ ಆ ಒಂದು ಗುಡ್ ನ್ಯೂಸ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನ ಅತ್ಯಂತ ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಡಲಿರುವುದರಿಂದ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈ ಕದನದ ಮೇಲಿದೆ.

ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರು ಟೀಂ ಇಂಡಿಯಾದ ಪ್ಲ್ಯಾನ್ ಮತ್ತು ಆಟಗಾರರ ಲಭ್ಯತೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾಗಿದ್ದ ದೊಡ್ಡ ಚಿಂತೆ ಈಗ ದೂರವಾಗಿದೆ. ಅನಾರೋಗ್ಯದಿಂದಾಗಿ ಅಮೆರಿಕ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.

ಇಶಾನ್ ಕಿಶನ್ ಅವರೊಂದಿಗೆ ಅಭಿಷೇಕ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ಪಾಕ್ ಬೌಲರ್‌ಗಳ ನಿದ್ದೆಗೆಡಿಸುವುದು ಗ್ಯಾರಂಟಿ.

ಕೊಲಂಬೊದ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗತಾಣ. ಇದನ್ನು ಗಮನದಲ್ಲಿಟ್ಟುಕೊಂಡು ಸೂರ್ಯಕುಮಾರ್ ಯಾದವ್ ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಅಮೋಘ ದಾಖಲೆ ಹೊಂದಿರುವ ಚೈನಾಮನ್ ಬೌಲರ್ ಕುಲ್ದೀಪ್ ನಾಳೆಯ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಫಿಟ್ ಆಗಿದ್ದು, ತಂಡದ ಸಮತೋಲನ ಹೆಚ್ಚಿಸಲು ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಪಾಕ್ ಆಟಗಾರರ ಜೊತೆ ಕೈಕುಲುಕುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸೂರ್ಯ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. “ಟಾಸ್ ಸಮಯದಲ್ಲಿ ಏನಾಗುತ್ತದೆಯೋ ಕಾದು ನೋಡಿ, ಅದಕ್ಕೆ ಇನ್ನೂ 24 ಗಂಟೆ ಸಮಯವಿದೆ,” ಎನ್ನುವ ಮೂಲಕ ಕುತೂಹಲ ಕಾಯ್ದಿರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !