February 14, 2026
Saturday, February 14, 2026
spot_img

ಒಂದು ಸಾವಿರ ದಿನಗಳಲ್ಲಿ ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ಸರಕಾರಕ್ಕೆ ಸಿ.ಟಿ. ರವಿ ಪ್ರಶ್ನೆ!

ಹೊಸದಿಗಂತ ವರದಿ, ಮಂಗಳೂರು:

ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆ ನಡೆಸುತ್ತಿದ್ದು, ಒಂದು ಸಾವಿರ ದಿನಗಳ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಸಂಭ್ರಮಾಚರಣೆಯೇ? ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದ ಸಾಲ ಏರಿಕೆಯಾಗಿದೆ. ಜನರು ಸಂಕಟಪಡುತ್ತಿದ್ದರೆ ನೀವು ಸಂಭ್ರಮಪಡುವುದು ವಿಕೃತ ಮನಸ್ಥಿತಿಯ ಪರಮಾವಽ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಸರ್ಕಾರಕ್ಕೆ ಪ್ರಖ್ಯಾತಿ ತರುವ ಒಂದೇ ಒಂದು ಕೆಲಸ ಮಾಡಿಲ್ಲ. ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯದೆ ಆಡಳಿತ ವ್ಯವಸ್ಥೆಯೇ ನೆಲಕಚ್ಚಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಸಂಭ್ರಮಾಚರಣೆ ಮಾಡ್ತಿದ್ದೀರಾ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಕಳೆದ ೧ ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಸಚಿವರು ಶಾಸಕರುಗಳ ಬಂಧನ, ರೈತರ ಆತ್ಮಹತ್ಯೆ, ಅತ್ಯಾಚಾರ ಏರಿಕೆ, ಗುತ್ತಿಗೆದಾರರ ಬಿಲ್ ಬಾಕಿ, ಪರಿಶಿಷ್ಟಜಾತಿ- ಪಂಗಡಕ್ಕೆ ಮೀಸಲಿಟ್ಟ ಹಣ ಅಕ್ರಮ ವರ್ಗಾವಣೆ, ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ, ಗೃಹಲಕ್ಷ್ಮೀ ಹಣ ದುರುಪಯೋಗ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಲೈಸೆನ್ಸ್ ಹಗರಣಗಳು ನಡೆದಿದ್ದು, ಇದನ್ನೆಲ್ಲ ಮಾಡಿದ್ದೀವಿ ಅಂತ ಸಂಭ್ರಮಪಡ್ತಾ ಇದ್ದೀರಾ? ಒಂದಾದರೂ ಸಂಭ್ರಮದ ವಿಚಾರ ಹೇಳಿಬಿಡಿ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನತೆ ೧೩೬ ಸೀಟ್ ಕೊಟ್ಟಿದ್ದಾರೆ. ಆದರೆ ಈಗ ಸಿಎಂ ಯಾರು ಎನ್ನುವುದು ಕಾಂಗ್ರೆಸ್‌ನ ಸಮಸ್ಯೆಯೇ ಹೊರತು ಜನರ ಸಮಸ್ಯೆ ಅಲ್ಲ. ಮುಂಬರುವ ಬಜೆಟ್ ಮಂಡನೆಗಿಂತ ಮೊದಲಾದರೂ ಸಿಎಂ ಕುರ್ಚಿ ಸಮಸ್ಯೆಯನ್ನು ಬಗೆಹರಿಸಿ, ಆಡಳಿತದ ಹಳಿ ತಪ್ಪಿದ್ದನ್ನು ಸರಿಪಡಿಸಿ ಎಂದು ಹೇಳಿದರು.

ರಾಜ್ಯದ ಬಿಜೆಪಿ ಆಡಳಿತವಿದ್ದಾಗಲೂ ಗುತ್ತಿಗೆದಾರರಿಂದ ಭ್ರಷ್ಟಾಚಾರ ಆರೋಪ, ಅಽಕಾರ ಹಂಚಿಕೆ ಕುರಿತಂತೆ ವಿವಾದ ಆಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರಕಾರದಲ್ಲಿರುವ ಇದ್ದ ಭ್ರಷ್ಟಾಚಾರ ಸಾಬೀತಾಗಿಲ್ಲ ಎಂದರು.

ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಮೇಲಿನ ಆರೋಪ ರಾಜಕೀಯ ಪ್ರೇರಿತ. ಅವರ ಮೇಲಿನ ಆರೋಪಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಸಿ.ಟಿ. ರವಿ ಹೇಳಿದರು.

ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ವಿಕಾಸ್ ಪುತ್ತೂರು, ವಸಂತ ಪೂಜಾರಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !