ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಶೀತಲ ಸಮರ’ ಈಗ ರೋಚಕ ಘಟ್ಟಕ್ಕೆ ತಲುಪಿದಂತಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಮಂಡಿಸಲು ಸಜ್ಜಾಗುವ ಮೂಲಕ ಇತಿಹಾಸ ಸೃಷ್ಟಿಸಲು ಹೊರಟಿದ್ದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರ ತಂತ್ರಗಾರಿಕೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿವೆ.
ಇತ್ತೀಚೆಗಷ್ಟೇ ಹೈಕಮಾಂಡ್ ಭೇಟಿ ಮಾಡಿ ಮರಳಿರುವ ಡಿ.ಕೆ. ಶಿವಕುಮಾರ್, “ನನಗೆ ಅಜ್ಜಯ್ಯನ ಆಶೀರ್ವಾದವಿದೆ” ಎಂದು ಹೇಳುವ ಮೂಲಕ ತಮ್ಮ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ. “ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು” ಎನ್ನುವ ಅವರ ಟ್ವೀಟ್ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, “ಹೈಕಮಾಂಡ್ ಏನಾದರೂ ಟ್ವೀಟ್ ಮಾಡಿದೆಯಾ? ಇಲ್ಲವಲ್ಲ?” ಎಂದು ಕೇಳುವ ಮೂಲಕ ಡಿಕೆಶಿ ತಂತ್ರಕ್ಕೆ ಲಗಾಮು ಹಾಕಲು ಯತ್ನಿಸಿದ್ದಾರೆ. “ಹೈಕಮಾಂಡ್ ಹೇಳಿದ್ದೇ ಫೈನಲ್” ಎನ್ನುವ ಸಿದ್ದರಾಮಯ್ಯ ಅವರ ಮಾತಿನ ಹಿಂದೆ ಅಚಲವಾದ ಧೈರ್ಯ ಎದ್ದು ಕಾಣುತ್ತಿದೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಕ್ಕಪಕ್ಕದಲ್ಲೇ ಕುಳಿತಿದ್ದರೂ ಮಾತುಕತೆ ನಡೆಸದ ಈ ಇಬ್ಬರು ನಾಯಕರ ನಡುವಿನ ಅಂತರ ಹಾವೇರಿಯಲ್ಲಿ ಜಗಜ್ಜಾಹೀರಾಗಿದೆ.
ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಅವರ ಬೆಂಬಲಿಗರು ಕೂಗಿದರೆ, ಡಿಕೆಶಿ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಜೈಕಾರ ಹಾಕಿದರು.
ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆಯೇ ಡಿಕೆಶಿ ವೇದಿಕೆಯಿಂದ ನಿರ್ಗಮಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿದ್ದರೂ ಹಾವೇರಿ ಸಮಾವೇಶದಿಂದ ದೂರ ಉಳಿದಿರುವುದು ಮತ್ತು ಹೈಕಮಾಂಡ್ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮೌನ ವಹಿಸಿರುವುದು ‘ಯಕ್ಷ ಪ್ರಶ್ನೆ’ಯಾಗಿ ಉಳಿದಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಡಿಕೆಶಿ ನಡೆಸಿದ ಸುದೀರ್ಘ ಚರ್ಚೆಯ ಫಲಿತಾಂಶ ಫೆಬ್ರವರಿ 17ರ ನಂತರ ಹೊರಬೀಳಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.
ಕಾಂಗ್ರೆಸ್‌ನಲ್ಲಿನ ಈ ಗೊಂದಲವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ನಾಯಕರು, “ಹೈಕಮಾಂಡ್ ಕೈಯಲ್ಲಿ ರಾಜ್ಯ ಸರ್ಕಾರ ಗೊಂಬೆಯಾಟವಾಡುತ್ತಿದೆ” ಎಂದು ಟೀಕಿಸಿದ್ದಾರೆ.



