July 20, 2026
Monday, July 20, 2026
spot_img

ಬರದ ಎಚ್ಚರಿಕೆ! ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿರಲಿ: ಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ವರದಿ ​ಚಿತ್ರದುರ್ಗ:

ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲದ ಪರಿಸ್ಥತಿ ಎದುರಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓಗಳು ಸಂಭವನೀಯ ಬರಗಾಲದ ವಿಪತ್ತನ್ನು ಎದುರಿಸಲು ಸನ್ನದ್ದರಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.

ಈ ಕುರಿತು ಭಾನುವಾರ ಬೆಂಗಳೂರಿನ ವಿಧಾನಸೌಧ ೩ನೇ ಮಹಡಿಯಲ್ಲಿರುವ ಸಮಿತಿ ಕೊಠಡಿ ಸಂಖ್ಯೆ ೩೧೩, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಬರದ ವಿಪತ್ತು ಎದುರಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಬೇಕು. ಯುದ್ದೋಪಾದಿಯಲ್ಲಿ ಬರದ ನಿರ್ವಹಣೆ ಒತ್ತು ನೀಡಬೇಕು ಎಂದರು.

ಬರ ಸಂದರ್ಭದಲ್ಲಿನ ಸರ್ಕಾರ ಕೈಗೊಂಡಿರುವ ಕಾರ್ಯಗಳು ಹಾಗೂ ಕಾಳಜಿ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಅಧಿಕಾರಿಗಳು ಸರ್ಕಾರದ ಧ್ವನಿಯಾಗಿ ಕೆಲಸ ಮಾಡಬೇಕು.ವಿಪತ್ತು ಪರಿಹಾರ ಕಾರ್ಯಕ್ಕೆ ಸರ್ಕಾರ ಸನ್ನದ್ಧವಾಗಿದೆ.ಯಾವುದೇ ಹಣಕಾಸಿನ ಕೊರತೆಯಿಲ್ಲ. ಜನರಿಗೆ ಕುಡಿಯುವ ನೀರು ಕೈಗೊಂಡ ಕ್ರಮಗಳ ಬಗ್ಗೆ ಜನತೆಗೆ ತಿಳಿಸಿ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓಗಳು ಕೃಷಿ,ತೋಟಗಾರಿಕೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಬರ ನಿರ್ವಹಣೆಗೆ ಕಾರ್ಯಯೋಜನೆ ರೂಪಿಸಬೇಕು. ಈ ಬಗ್ಗೆ ಪ್ರಜಾಸೇವಾ, ಕಂದಾಯ ಇಲಾಖೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಬರದ ಹಿನ್ನೆಲೆಯಲ್ಲಿ ಅಗತ್ಯ ಇರುವ ಜಿಲ್ಲೆಗಳಿಗೆ ಕೂಡಲೇ ಹಣ ಪೂರೈಸಲು ಈಗಾಗಲೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿನ ಎಲ್ಲ ಜಲಾಶಯಗಳಲ್ಲಿನ ನೀರಿನ ಮಟ್ಟದ ಪರಿಸ್ಥಿತಿಯ ಬಗ್ಗೆ ವಾರಕ್ಕೆ ಒಮ್ಮೆ ಮಾಹಿತಿ ನೀಡುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ಅಗತ್ಯವಿರುವ ಕಡೆ ಮೇವು ಬ್ಯಾಂಕಿನ ಸ್ಥಾಪಿಸಬೇಕು. ಮಳೆ ಕೊರತೆ ಮುಂದುವರೆದಲ್ಲಿ ಮತ್ತಷ್ಟು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ:

ಬರ ಅಧ್ಯಯನಕ್ಕೆ ಕೇಂದ್ರ ತಂಡ :

ಸದ್ಯದಲ್ಲೇ ರಾಜ್ಯಕ್ಕೆ ಬರ ಪರಿಸ್ಥಿತಿ ಅವಲೋಕನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಲಿದೆ. ತಂಡಕ್ಕೆ ಅತ್ಯಗತ್ಯ ಮಾಹಿತಿ ಕೊಡಲು ತಯಾರಿ ಮಾಡಿಕೊಳ್ಳಬೇಕು. ಈಗಾಗಲೇ ರಾಜ್ಯದಿಂದ ಕಲಬುರಗಿ, ಬೆಳಗಾವಿನಲ್ಲಿ ಸಂಚರಿಸಿ ಬರದ ಅವಲೋಕನ ನಡೆಸಲಾಗಿದೆ. ಇದೆ ರೀತಿ ರಾಜ್ಯದ ಬೇರೆ ಬೇರೆ ಕಡೆಗೆ ಸಂಚರಿಸಿ ಬರ ಅವಲೋಕನ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಶುದ್ಧ ನೀರು ಪೂರೈಕೆ ಡಿಸಿಎಂ ಡಾ.ಜಿ.ಪರಮೇಶ್ವರ ತಾಕೀತು :

ರಾಜ್ಯದ ಜನತೆಗೆ ಶುದ್ಧ ಕುಡಿವ ನೀರು ಪೂರೈಸಬೇಕು. ಈ ದಿಶೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚನೆ ನೀಡಿದರು.

ಸುಮಾರು ೭೫ ವರ್ಷಗಳ ಹಿಂದೆ ರಾಜ್ಯದಲ್ಲಿ ಇಂತಹ ಬರದ ದುಸ್ತಿತಿ ಎದುರಾಗಿತ್ತು. ೧೯೬೫ ಮತ್ತು ೧೯೭೨ರಲ್ಲಿ ಸಹ ಇಂತಹ ಬರದ ಛಾಯೆ ರಾಜ್ಯದಲ್ಲಿ ಆವರಿಸಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಉಷ್ಣಾಂಶದ ಪ್ರಮಾಣ ಏರಿಕೆ ಆಗುತ್ತಿದೆ. ಹೆಚ್ಚಿನ ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಮುಂದುವರೆದಿದೆ. ರಾಜ್ಯದ ಅಂದಾಜು ೮೮ ತಾಲೂಕುಗಳಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿತಿದೆ ಎಂದು ವರದಿಯಾಗುತ್ತಿದೆ ಎಂದರು.

ಜನರಿಗೆ ಕುಡಿವ ನೀರು ಕೊಡಲೇಬೇಕು. ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸಬೇಕು.ಜಾನುವಾರುಗಳಿಗೆ ಸಹ ಕುಡಿವ ನೀರು ಮತ್ತು ಮೇವು ಪೂರೈಕೆಗೆ ಸಹ ಒತ್ತು ಕೊಡಬೇಕು. ಈ ಎಲ್ಲದರ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ಕ್ರಮ ವಹಿಸಬೇಕು ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !