ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಶಾಸಕರ ವಿದೇಶ ಪ್ರವಾಸ ಹಾಗೂ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ವಿಚಾರವನ್ನು ಸಮರ್ಥಿಸಿಕೊಂಡ ಅವರು, “ಯಾರಾದರೂ ಖಾಸಗಿಯಾಗಿ ಪ್ರವಾಸಕ್ಕೆ ಹೋದರೆ ತಡೆಯಲು ಸಾಧ್ಯವೇ? ನಾವು ಎಲ್ಲೂ ಹೋಗಬಾರದಾ? ಕಳೆದ ವರ್ಷ ಕೆಲವರು ಹೋದಾಗ ಸುಮ್ಮನಿದ್ದವರು ಈಗ ಯಾಕೆ ಪ್ರಶ್ನಿಸುತ್ತಿದ್ದಾರೆ? ಪಕ್ಷದ ವಿಚಾರ ಬಂದಾಗ ನಾವೆಲ್ಲರೂ ಒಂದೇ,” ಎಂದು ಪ್ರಶ್ನಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರು.
ಇನ್ನು ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಎದ್ದಿರುವ ಚರ್ಚೆಗಳಿಗೆ ಉತ್ತರಿಸಿದ ಅವರು, “ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಹೈಕಮಾಂಡ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷದ ಒಳಗಿನ ಕಿತ್ತಾಟವನ್ನು ಮುಚ್ಚಿ ಹಾಕಲು ನಮ್ಮತ್ತ ಬೆರಳು ತೋರಿಸುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಸರ್ಕಾರದ 1000 ದಿನಗಳ ಸಂಭ್ರಮಾಚರಣೆಯನ್ನು ಟೀಕಿಸುತ್ತಿರುವ ಬಿಜೆಪಿಗೆ ಟಾಂಗ್ ನೀಡಿದ ಸಚಿವರು, “ಒಳ್ಳೆಯ ಕೆಲಸಗಳನ್ನು ಸಹಿಸುವ ಶಕ್ತಿ ಅವರಿಗಿಲ್ಲ. ಸದನದಲ್ಲಿ ಜನಪದ ಚರ್ಚೆ ಮಾಡಲು ಬಿಡದೆ, ಅನಗತ್ಯ ವಿಷಯಗಳ ಬಗ್ಗೆ ಕಾಲಹರಣ ಮಾಡುತ್ತಾರೆ. ಜನರಿಗೆ ನಮ್ಮ ಸರ್ಕಾರದ ಮೇಲೆ ನಂಬಿಕೆ ಇದೆ ಎಂಬುದು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ,” ಎಂದರು.
ಅಲ್ಲದೆ, ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರ ಅಲಭ್ಯತೆಯ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಇದು ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದರಿಂದ ಹಾಗೂ ಪೂರ್ವ ನಿಗದಿತ ಕೆಲಸಗಳಿದ್ದ ಕಾರಣ ಅವರು ಬರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.



