ಹೊಸದಿಗಂತ ವಿಜಯಪುರ:
“ರಾಜ್ಯದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮೇಲೆ ಸಾಲದ ಹೊರೆ ಹೇರುತ್ತಿದೆ. ದಿನಕ್ಕೆ ಸರಾಸರಿ 300 ಕೋಟಿ ರೂ.ಗಳಂತೆ ವರ್ಷಕ್ಕೆ 1.5 ಲಕ್ಷ ಕೋಟಿ ರೂ. ಸಾಲ ಮಾಡುತ್ತಿರುವುದೇ ಈ ಸರ್ಕಾರದ ಸಾಧನೆ” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು.
ಸರ್ಕಾರವು ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಾ ಸಮಯ ವ್ಯರ್ಥ ಮಾಡುತ್ತಿದೆ. ಶಾಸಕರ ಬಲ ಪ್ರದರ್ಶನ ಮತ್ತು ಕುರ್ಚಿ ಕಚ್ಚಾಟದಲ್ಲಿಯೇ ಕಾಲಹರಣವಾಗುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಅಭಿವೃದ್ಧಿಗಿಂತ ಸಾಲ ಮಾಡುವುದೇ ಸರ್ಕಾರದ ದೊಡ್ಡ ಕೊಡುಗೆಯಾಗಿದೆ ಎಂದು ಟೀಕಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಶಕ್ತಿಯನ್ನು ಧಾರೆ ಎರೆದು ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿವೆ. “ನಾವು ಮೈತ್ರಿಯ ವಿಮಾನ ಹತ್ತಿದ್ದೇವೆ. ಹಾರಾಟದ ಸಮಯದಲ್ಲಿ ಸಣ್ಣಪುಟ್ಟ ಏರಿಳಿತಗಳು ಇರುವುದು ಸಹಜ. ಹಾಗೆಂದು ಮಧ್ಯದಲ್ಲಿ ಯಾರಾದರೂ ಇಳಿಯಲು ಹೇಳಿದರೆ ಅದು ಸಾಧ್ಯವಿಲ್ಲ” ಎಂದು ಮೈತ್ರಿ ಗಟ್ಟಿಯಾಗಿದೆ ಎಂಬ ಸಂದೇಶ ನೀಡಿದರು. ಅಲ್ಲದೆ, ಬಿಜೆಪಿ ಜೊತೆ ಕೈಜೋಡಿಸಿದ ಮಾತ್ರಕ್ಕೆ ಸೈದ್ಧಾಂತಿಕವಾಗಿ ರಾಜಿಯಾಗಿಲ್ಲ, ಜಾತ್ಯತೀತತೆ ನಮ್ಮ ರಕ್ತದಲ್ಲಿದೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಂದಿನ ಸಂಪುಟದ ಶೇ. 30ರಷ್ಟು ಸಚಿವರು ಜೆಡಿಎಸ್‌ನಿಂದ ಬೆಳೆದು ಬಂದವರೇ ಆಗಿದ್ದಾರೆ. ಅಂದು ಹೆಚ್.ಡಿ. ದೇವೇಗೌಡರು ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿ ಮಾಡದಿದ್ದರೆ ಅವರು ಇಂದು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ. ಜೆಡಿಎಸ್ ಕೇವಲ ಹಳೆ ಮೈಸೂರಿಗೆ ಸೀಮಿತವಾಗಿಲ್ಲ, ಇಡೀ ರಾಜ್ಯದಲ್ಲಿ ಪಕ್ಷಕ್ಕೆ ಬಲಿಷ್ಠ ನೆಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ನನಗೆ ಶಾಸಕ ಅಥವಾ ಸಂಸದನಾಗುವ ಆಸೆ ಇಲ್ಲ. ಪಕ್ಷ ಸಂಘಟನೆಯೇ ನನ್ನ ಏಕೈಕ ಗುರಿ. ಈಗಾಗಲೇ 9 ಸಾವಿರ ಕಿ.ಮೀ. ಪ್ರವಾಸ ಮಾಡಿದ್ದು, 54ಕ್ಕೂ ಹೆಚ್ಚು ಕ್ಷೇತ್ರಗಳನ್ನು ಸಂದರ್ಶಿಸಿದ್ದೇನೆ” ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.



